ಬೆಂಗಳೂರು : ಕಾಂಗ್ರೆಸ್ ನಾಯಕರ ಅಹೋರಾತ್ರಿ ಧರಣಿ, ಗದ್ದಲ, ಕೋಲಾಹಲ ಮುಂದುವರಿದಿದ್ದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಿದ್ದಾರೆ.
ವಿಧಾನಸಭೆಯಲ್ಲಿ ಮುಂದುವರೆದ ಕಾಂಗ್ರೆಸ್ ಮುಖಂಡರ ಪ್ರತಿಭಟನೆಯಿಂದ ಸದನ ತಹಬದಿಗೆ ಬಾರದ ಕಾರಣ ಸ್ಪೀಕರ್ ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು, ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದು ಧಿಕ್ಕಾರ ಘೋಷಣೆ ಕೂಗಿದರು. ಕಾಂಗ್ರೆಸ್ ಧರಣಿ ನಡುವೆಯೇ ಸ್ಪೀಕರ್ ಪ್ರಶ್ನೋತ್ತರ ಕಲಾಪ ಆರಂಭಿಸಿದರು.
ಕಾಂಗ್ರೆಸ್ ಧರಣಿಗೆ ಕಾನೂನು ಸಚಿವ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರು ಕಲಾಪದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದು ಅಪಹಾಸ್ಯ ಮಾಡುವ ಕೆಲಸ. ಕಾಂಗ್ರೆಸ್ ಧರಣಿ ದುರಾದೃಷ್ಟಕರ. ಸ್ಪೀಕರ್ ರೂಲಿಂಗ್ ಕೊಟ್ಟು ನಿಲುವಳಿ ಸೂಚನೆ ನಿರಾಕರಿಸಿದ್ದಾರೆ. ಯಾರಿಗೂ ಮಾತಾಡಲು ಅವಕಾಶ ಸಿಕ್ತಿಲ್ಲ. ಚರ್ಚೆ ಮಾಡಲು ಧರಣಿ ಅಡ್ಡಿಯಾಗಿದೆ. ಧರಣಿ ಅಂತ್ಯ ಮಾಡಿ ಚರ್ಚೆಗೆ ಅವಕಾಶ ಕೊಡಲಿ ಎಂದರು.
ಕಾಂಗ್ರೆಸ್ ಧರಣಿಗೆ ಗರಂ ಆದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಧರಣಿ ಕೈಬಿಟ್ಟು ಚರ್ಚೆಯಲ್ಲಿ ಭಾಗವಹಿಸಿ. ಕಲಾಪಕ್ಕೆ ಅಡ್ಡಿ ಮಾಡೋದು ಸರಿಯಾದ ಕ್ರಮ ಅಲ್ಲ.
ನಿಮ್ಮ ಪ್ರತಿಭಟನೆಯನ್ನ ಹೊರಗಡೆ ಮಾಡಿ, ಇಲ್ಲಿ ಪ್ರತಿಭಟನೆ ಮಾಡಿ ಸಮಯ ವ್ಯರ್ಥ ಮಾಡಬೇಡಿ, ರಾಜ್ಯದ ವಿಚಾರಗಳ ಬಗ್ಗೆ ಚರ್ಚೆ ಮಾಡಲಿ, ಬೇರೆ ಸದಸ್ಯರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.
ಇದನ್ನೂ ಓದಿ: ನಿಷೇಧಾಜ್ಞೆ ಉಲ್ಲಂಘನೆ : ವಿದ್ಯಾರ್ಥಿನಿಯರ ಮೇಲೆ ಕೇಸು ದಾಖಲಿಸಿದ ಪ್ರಾಂಶುಪಾಲರು
ಮಧ್ಯಪ್ರವೇಶ ಮಾಡಿದ ಕಾಂಗ್ರೆಸ್ ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಸಸ್ಪೆಂಡ್ ಮಾಡಲು ನಿಮಗೆ ಅವಕಾಶ ಇದೆ. ನಿಮ್ಗೆ ಬೇಕಾದ್ರೆ ನಮ್ಮನ್ನು ಸಸ್ಪೆಂಡ್ ಮಾಡಿ ಎಂದು ಸಲಹೆ ಜೊತೆಗೆ ಸವಾಲು ಹಾಕಿದರು.
ಸ್ವಪಕ್ಷೀಯರನ್ನೇ ಸಸ್ಪೆಂಡ್ ಮಾಡುವಂತೆ ಸಲಹೆ ನೀಡಿದ ರಮೇಶ್ ಕುಮಾರ್ ಹೇಳಿದಂತೆಯೇ ಮಾಡಿ ಎಂದು ಜೆಡಿಎಸ್ ಹಿರಿಯ ಶಾಸಕ ಹೆಚ್.ಡಿ ರೇವಣ್ಣ ಒತ್ತಾಯ ಮಾಡಿದರು.