ಬೆಂಗಳೂರು: ವಿಧಾನಸಭೆ ಚುನಾವಣೆ ಡಿಸೆಂಬರ್ನಲ್ಲೇ ಎದುರಾಗುವ ಸಾಧ್ಯತೆಗಳಿವೆ. ಜೆಡಿಎಸ್ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ 'ಜನತಾಮಿತ್ರ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕನಿಷ್ಠ ಹದಿನೈದು ಕ್ಷೇತ್ರಗಳನ್ನುಗೆಲ್ಲುವ ವಾತಾವರಣ ಜೆಡಿಎಸ್ಗೆ ಇದೆ. ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ಸಂಘಟಿತರಾಗಬೇಕು. ಬೆಂಗಳೂರು ಹಂತ-ಹಂತವಾಗಿ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ನಮ್ಮ ಪಕ್ಷ ಶಕ್ತಿಯುತವಾಗಿಲ್ಲ ಎಂಬ ಭಾವನೆ ತೆಗೆದುಹಾಕಬೇಕು ಎಂದು ಹೇಳಿದರು.
ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಮತಗಳಿವೆ. ಕಾರ್ಯಕರ್ತರು ಇದನ್ನು ಮರೆಯಬಾರದು. ನಾವೇನು ಅಧಿಕಾರ ಇದ್ದಾಗ ಅಕ್ರಮವಾಗಿ ಹಣ ಲೂಟಿ ಮಾಡಿಲ್ಲ. ನಮ್ಮಲ್ಲಿ ಮೂರು ಜನ ಶಾಸಕರು ಪಕ್ಷದಲ್ಲಿದ್ದರು. ಅವರೂ ಬೇರೆ ಕಡೆ ಹೋಗಿದ್ದಾರೆ. ಚಾಮರಾಜಪೇಟೆಯಲ್ಲಿ ನಮ್ಮ ನಾಯಕರು ಹೋರಾಟ ಮಾಡಿದರು. ಅದರಿಂದಾಗಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮಿ ಲೇಔಟ್ನಲ್ಲೂ ಗೆದ್ದೆವು. ಪಕ್ಷ ಉಳಿದರೆ ನಾವೆಲ್ಲ ಉಳಿಯುತ್ತೇವೆ ಎಂದರು.
ಭಗವಂತನ ಆಶೀರ್ವಾದದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟ ಸೇರಿದ್ದೇನೆ. ಈಗಿನ ಸರ್ಕಾರ ಲೂಟಿ ಹೊಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ನನಗೆ ಒಂದು ಅವಕಾಶ ಕೊಡಲಿ. ನಮಗೆ ಇಪ್ಪತ್ತು ವರ್ಷ ಬೇಡ ಐದು ವರ್ಷದ ಅವಕಾಶ ಕೊಟ್ಟರೆ ಸಾಕು ಎಂದು ಮನವಿ ಮಾಡಿದರು.
ಆಗಸ್ಟ್ನಲ್ಲಿ 'ಪಂಚರತ್ನ' ರಥಯಾತ್ರೆ: ಆಗಸ್ಟ್ನಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಆರಂಭಿಸುತ್ತೇವೆ. ಈ ಮೂಳಕ ಹಳ್ಳಿ-ಹಳ್ಳಿಗೆ ಹೋಗುತ್ತೇನೆ. ಮೂರು ತಿಂಗಳು ಬೆಂಗಳೂರಿಗೆ ಬರುವುದಿಲ್ಲ. ಎಲ್ಲೆಡೆ ಸುತ್ತುತ್ತೇನೆ. ಹದಿನೈದು ದಿನ ಬೆಂಗಳೂರಿಗೆ ಮೀಸಲು ಇಟ್ಟಿದ್ದೇನೆ. ಎಲ್ಲೆಲ್ಲಿ ಜನತಾ ಮಿತ್ರ ಕಾರ್ಯಕ್ರಮ ಮಾಡುತ್ತಾರೋ ಅಲ್ಲಿಗೆ ಹೋಗಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ಆರ್.ಮಂಜುನಾಥ್, ಕೇರಳದ ಮಾಜಿ ಸಚಿವ ಕೃಷ್ಣ ಕುಟ್ಟಿ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ಓದಿ: 'ದೇವೇಗೌಡರ ಬಗ್ಗೆ ಆಡಿದ ಮಾತುಗಳು ವಿಕೃತ ಮನಸ್ಸಿನವು; ಮಧುಗಿರಿಯಲ್ಲಿ ಜನರಿಂದ್ಲೇ ಉತ್ತರ ಕೊಡಿಸುವೆ'