ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಜನತಾ ಪಾರ್ಟಿಯ ವತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.
ಈ ಕುರಿತು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನೆಡೆಸಿದ ಜನತಾ ಪಾರ್ಟಿ ನಗರ ಅಧ್ಯಕ್ಷ ಬಿ.ಎನ್.ಗೋಪಾಲಕೃಷ್ಣ ಚುನಾವಣೆ ಅಂಗವಾಗಿ ರಾಷ್ಟ್ರೀಯ ಪಕ್ಷಗಳು ಮತದಾರರನ್ನು ತಮ್ಮ ಕಡೆಗೆ ಓಲೈಸಿಕೊಳ್ಳಲು ಟಿವಿ, ಫ್ರಿಡ್ಜ್, ಕುಕ್ಕರ್, ಸೀರೆ, ಹಣ ಹಂಚುವುದರ ಮೂಲಕ ಮತದಾರರನ್ನು ಭ್ರಷ್ಟಕೂಪಕ್ಕೆ ತಳ್ಳುತ್ತಿವೆ. ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡುತ್ತಿವೆ. ಇಂತಹ ನೀಚ ಸಂಸ್ಕೃತಿಯನ್ನು ಬೆಳೆಸಿಕೊಂಡ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಬೇಕಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗವು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಜನತಾ ಪಕ್ಷದಿಂದ ಒತ್ತಾಯಿಸುತ್ತಿದ್ದೇವೆ.
ಜನಪರವಾದ ಕೆಲಸ ಮಾಡಲು ಜನತಾ ಪಕ್ಷ ಮತ್ತೆ ಬರುತ್ತಿದೆ: ಇತಿಹಾಸವಿರುವಂತಹ ನೇಗಿಲು ಹೊತ್ತ ರೈತನ ಜನತಾ ಪಕ್ಷ ಮತ್ತೆ ಮರುಕಳಿಸುತ್ತಿದೆ. ಜನತಾ ಪಕ್ಷ ಜನಪರವಾದ ಕೆಲಸ ಮಾಡಲು ಬರುತ್ತಿದೆ. 2023ರ ಚುನಾವಣೆಯಲ್ಲಿ ಜನತಾ ಸರ್ಕಾರ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಭ್ರಷ್ಟ ಪಕ್ಷಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಜನತಾ ಪಕ್ಷದಿಂದ ಬಿ.ಎನ್. ಗೋಪಾಲಕೃಷ್ಣ (ರಾಜಾಜಿನಗರ), ನಾಗರಾಜ್ (ವಿಜಯನಗರ), ಎ.ರಾಜ್ (ಗೋವಿಂದರಾಜ ನಗರ), ಅಬ್ದುಲ್ ರೌಫ್ (ಗಾಂಧಿ ನಗರ), ಈಶ್ವರ್ (ಬ್ಯಾಟರಾಯನಪುರ), ಚಂದ್ರಶೇಖರ್ (ಕೆ.ಆರ್ ಪುರ), ಎ. ಸಂದೀಪ್ (ಪುಲಕೇಶಿ ನಗರ), ಸಂತೋಷ್ ಕುಮಾರ್ (ರಾಜ ರಾಜೇಶ್ವರಿ ನಗರ), ದಿಲೀಪ್ ಕುಮಾರ್ (ಸರ್ವಜ್ಞ ನಗರ), ಎಂ ಸ್ನೇಹ (ದಾಸರಹಳ್ಳಿ), ನಳಿನಿ ಗೌಡ (ಮಹಾಲಕ್ಷ್ಮೀ ಲೇಔಟ್), ಎಂ ಶಿವಕುಮಾರ್ (ಮಲ್ಲೇಶ್ವರ) ಹಾಗೂ ಜಿ. ಉದಯ ಶಂಕರ್ (ಯಶವಂತಪುರ) ಅವರನ್ನು ಕಣಕ್ಕಿಸಲಾಗುತ್ತಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಪಕ್ಷದ ರಾಜ್ಯ ಸದಸ್ಯತ್ವ ಸಮಿತಿ ಅಧ್ಯಕ್ಷ ಕೆ.ಎಂ. ಪಾಲಾಕ್ಷಯ್ಯ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೌಫ್, ಉಪಾಧ್ಯಕ್ಷ ಭೋಜರಾಜ್ ಸೇರಿದಂತೆ ಇನ್ನಿತರರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಬಾದಾಮಿ ಕ್ಷೇತ್ರದಲ್ಲಿ ನಾಳೆ ಸಿದ್ದರಾಮಯ್ಯ ಪ್ರವಾಸ.. ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ