ಬೆಂಗಳೂರು: ಕೋಲಾರ ಜಿಲ್ಲೆ, ಕೆಜಿಎಫ್ ತಾಲೂಕಿನಲ್ಲಿರುವ ಬಿಇಎಂಎಲ್‍ನ 971 ಎಕರೆ ಜಮೀನನ್ನು ಅಭಿವೃದ್ಧಿ ಪಡಿಸಿ, ಸಮಗ್ರ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಸುತ್ತಮುತ್ತ ಹೊಸದಾಗಿ ಜಮೀನು ಖರೀದಿಸಿ ಕೈಗಾರಿಕಾ ಪ್ರದೇಶ ನಿರ್ಮಿಸುವುದು ಅಷ್ಟು ಸುಲಭವಲ್ಲ. ಇದು ಸರ್ಕಾರಕ್ಕೂ ಹೊರೆ ಹಾಗೂ ಕೈಗಾರಿಕೆ ಪ್ರಾರಂಭಿಸುವ ಉದ್ಯಮಿಗಳಿಗೂ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ಕೆಐಎಡಿಬಿಯಲ್ಲಿರುವ ಜಮೀನುಗಳನ್ನು ಅಭಿವೃದ್ಧಿಪಡಿಸಿ ಟೌನ್‍ಶಿಪ್ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶ ಎಂದರು.
ಉದ್ಯೋಗದ ಕೊರತೆ ಸೃಷ್ಟಿ: ಇಂದು ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯೆ ರೂಪಕಲಾ ಅವರ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಉತ್ತರಿಸುತ್ತಿದ್ದರು. ಈ ವೇಳೆ, ಮಧ್ಯ ಪ್ರವೇಶಿಸಿದ ಸಿಎಂ, ಕೆಜಿಎಫ್ ಬೆಂಗಳೂರಿಗೆ ಹತ್ತಿರವಿದ್ದರೂ, ಕೈಗಾರಿಕಾ ವಂಚಿತ ಪ್ರದೇಶವಾಗಿದೆ. ಅದರಲ್ಲೂ ಕೋಲಾರ ಮತ್ತು ಕೆಜಿಎಫ್‍ನಲ್ಲಿ ಗಣಿಗಾರಿಕೆ ನಿಂತ ಮೇಲೆ ಉದ್ಯೋಗದ ಕೊರತೆ ಸೃಷ್ಟಿಯಾಗಿದೆ ಎಂದು ಹೇಳಿದರು.
ಉದ್ಯೋಗ ಸೃಷ್ಟಿ ಭರವಸೆ ನೀಡಿದ ಸಿಎಂ: ಕೆಜಿಎಫ್‍ನ ಬಿಇಎಂಎಲ್ ಕಾರ್ಖಾನೆಗೆ ಒಟ್ಟು 1870.30 ಎಕರೆ ಜಮೀನನನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ 971.33 ಎಕರೆ ಜಮೀನು ಹಾಗೆಯೇ ಉಳಿದಿದೆ. ಈಗಾಗಲೇ ಇದನ್ನು ಕೈಗಾರಿಕೆ ಸಚಿವರು ಮತ್ತು ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಈ ಜಮೀನನ್ನು ಕಂದಾಯ ಇಲಾಖೆಯಿಂದ ಕೈಗಾರಿಕೆ ಇಲಾಖೆ ಹಾಗೂ ಅಲ್ಲಿಂದ ಕೆಐಎಡಿಬಿಗೆ ಹಸ್ತಾಂತರ ಮಾಡುತ್ತೇವೆ. ಸಮಗ್ರ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಿ ಉದ್ಯೋಗ ಸೃಷ್ಟಿಗೂ ಗಮನ ಕೊಡುತ್ತೇವೆ ಎಂಬ ಭರವಸೆ ನೀಡಿದರು.
ಇದಕ್ಕೂ ಮೊದಲು ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಬಿಇಎಂಎಲ್‍ನಲ್ಲಿ ಬಾಕಿ ಉಳಿದಿರುವ ಜಮೀನನ್ನು ಕಂದಾಯ ಇಲಾಖೆಯಿಂದ ಹಸ್ತಾಂತರ ಮಾಡಲು ನಮ್ಮ ಇಲಾಖೆ ಹಲವಾರು ಬಾರಿ ಪತ್ರ ಮುಖೇನ ಮನವಿ ಮಾಡಲಾಗಿದೆ. ಕಂದಾಯ ಸಚಿವ ಆರ್ ಅಶೋಕ್ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ನಮ್ಮ ಇಲಾಖೆಗೆ ಹಸ್ತಾಂತರವಾದರೆ ಕೆಐಡಿಬಿ ಮೂಲಕ ಅಭಿವೃದ್ಧಿಪಡಿಸಿ ಕೈಗಾರಿಕೆ ಸ್ಥಾಪನೆಗೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡುತ್ತೇವೆ ಎಂದು ಹೇಳಿದರು.
ಮೇಲ್ದರ್ಜೆಗೆ ಮಿನಿ ಅಂಗನವಾಡಿ ಕೇಂದ್ರಗಳು : ಕೇಂದ್ರ ಸರ್ಕಾರ ಸಮ್ಮತಿಸಿದರೆ ರಾಜ್ಯದಲ್ಲಿರುವ ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಬದ್ಧ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಶಾಸಕ ಹರತಾಳ್ ಹಾಲಪ್ಪ ಅವರ ಪ್ರಶ್ನೆಗೆ ಉತ್ತರಿಸಿದರು.
ಪ್ರಸ್ತಾವನೆ ಸಲ್ಲಿಕೆ: ರಾಜ್ಯದಲ್ಲಿ ಒಟ್ಟು 3341 ಮಿನಿ ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 1002 ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಾರ್ಗಸೂಚಿಗಳ ಪ್ರಕಾರ ಕೇಂದ್ರ ಸರ್ಕಾರವೇ ಇವುಗಳನ್ನು ಮೇಲ್ದರ್ಜೆಗೇರಿಸಬೇಕು. ಅವರು ಅನುಮತಿಸಿದರೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಸಹಾಯಕಿಯರ ಗೌರಧನ ಹೆಚ್ಚಳ: ಅಂಗನವಾಡಿ ಕೇಂದ್ರಗಳನ್ನು ಶಿಶು ಅಭಿವೃದ್ಧಿ ಯೋಜನೆಯಡಿ ಜನಸಂಖ್ಯೆಗೆ ಅನುಗುಣವಾಗಿ ಮಂಜೂರು ಮಾಡಲಾಗುತ್ತದೆ. 150 ರಿಂದ 400 ಜನಸಂಖ್ಯೆ ಇರುವ ಕಡೆ ಮಿನಿ ಅಂಗನವಾಡಿ ಕೇಂದ್ರ, 400 ರಿಂದ 800 ಜನ ಇರುವ ಕಡೆ ಮುಖ್ಯ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಅಂಗನವಾಡಿ ಮಾದರಿಯಲ್ಲಿ ವೇತನ ನೀಡಲು ಅವಕಾಶ ಇರುವುದಿಲ್ಲ. ಈ ಸಾಲಿನ ಬಜೆಟ್‍ನಲ್ಲಿ ಅಂಗನವಾಡಿಗಳಿಗೆ ಹೊಸ ಕಟ್ಟಡ, ಅಂಗನವಾಡಿ ಕಾರ್ಯಕರ್ತೆಯರು , ಸಹಾಯಕಿಯರಿಗೆ ಗೌರಧನವನ್ನು ನಮ್ಮ ಸರ್ಕಾರ ಹೆಚ್ಚಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾವೇರಿ ನದಿ ಪಾತ್ರ ಹಾಗೂ ಇತರ ಹಳ್ಳಗಳಲ್ಲಿ ಮರಳು ಗಣಿಗಾರಿಕೆ ನಿಷೇಧ: ಸಚಿವ ಹಾಲಪ್ಪ ಆಚಾರ್
ಚಾಮರಾಜನಗರಕ್ಕೆ ಸ್ಥಳಾಂತರಿಸಲು ಆಕ್ಷೇಪ: ಮೈಸೂರಿನಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿಭಾಗ ಕಚೇರಿಯನ್ನು ಹೆಚ್ಚುವರಿಯಾಗಿ ತೆರೆಯಲು ಮುಖ್ಯಮಂತ್ರಿಗಳು ಸಮ್ಮತಿಸಿದರೆ, ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ವಿಧಾನಸಭೆಯಲ್ಲಿ ಹೇಳಿದರು.
ಈ ವೇಳೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಮೈಸೂರಿನಲ್ಲಿರುವ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿಭಾಗದ ಕಚೇರಿಯನ್ನು ಚಾಮರಾಜನಗರಕ್ಕೆ ಸ್ಥಳಾಂತರ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಬೈರತಿ ಬಸವರಾಜ್, ಪ್ರಸ್ತುತ ಮೈಸೂರಿನಲ್ಲಿ ಒಂದು ವಲಯ ಹಾಗೂ ಎರಡು ವಿಭಾಗೀಯ ಕಚೇರಿಗಳಿವೆ. ಚಾಮರಾಜನಗರ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಇದನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ ಎಂದರು.