ಬೆಂಗಳೂರು: ರೌಡಿಶೀಟರ್ ಸೈಲೆಂಟ್ ಸುನೀಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದು ಮತ್ತು ಇಂದು ನಾಗಮಂಗಲದ ಫೈಟರ್ ರವಿ ಬಿಜೆಪಿ ಸೇರ್ಪಡೆಯಾಗಿರುವುದನ್ನು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಸಮರ್ಥಿಸಿಕೊಂಡರು.
ಮಲ್ಲೇಶ್ವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರೌಡಿಶೀಟರ್ ಸೈಲೆಂಟ್ ಸುನೀಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದು ಮತ್ತು ಇಂದು ನಾಗಮಂಗಲದ ಫೈಟರ್ ರವಿ ಬಿಜೆಪಿ ಸೇರ್ಪಡೆ ವಿಚಾರ ಚರ್ಚೆಯಾಗುತ್ತಿದೆ. ಕಾನೂನು ಎಲ್ಲರಿಗೂ ಅನ್ವಯ ಆಗುತ್ತದೆ. ಕಾನೂನಿನಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರು ತಪ್ಪಿತಸ್ಥರೇ. ಸಮಾಜದಲ್ಲಿ ಎಲ್ಲರಿಗೂ ಒಳ್ಳೆಯ ರೀತಿಯಲ್ಲಿ ಬದುಕಿ ಬಾಳಲು ಅವಕಾಶ ಇದೆ. ಅದಕ್ಕೆ ಯಾವುದೋ ರೀತಿ ನಾಮಕರಣ ಮಾಡುವುದು ತಪ್ಪು ಎಂದರು.
'ಅವರಿಗೂ ಬದುಕಲು ಅವಕಾಶ ಇದೆ': ಅವರು ಯಾವುದೇ ರೀತಿಯ ಚಾರ್ಜ್‌ಶೀಟ್ ಅಥವಾ ಶಿಕ್ಷೆಯಲ್ಲಿದ್ದರೆ ಒಪ್ಪಿಕೊಳ್ಳೋಣ. ಯಾವುದೂ ಇಲ್ಲದ ವ್ಯಕ್ತಿಗಳಿಗೆ ಬದುಕಲು ಅವಕಾಶ ಕೊಡದೇ ನಿಂದಿಸುವ ಕೆಲಸ ಆಗಬಾರದು. ಕಾನೂನಿನಲ್ಲಿ ತಪ್ಪಾಗಿದ್ದರೆ ಅದು ತಪ್ಪು. ಚಾರ್ಜ್ ಶೀಟ್, ಶಿಕ್ಷೆ ಆಗಿದ್ದರೆ ಕಾನೂನಿನಲ್ಲಿ ಚುನಾವಣೆಗೆ ನಿಲ್ಲಲು ಅವಕಾಶ ಇಲ್ಲ. ಕಾನೂನಿನಲ್ಲಿ ಏನು ಅವಕಾಶ ಇರುತ್ತದೋ ಅದನ್ನು ಮಾತ್ರ ಮಾಡಲು ಆಗುತ್ತದೆ. ಬೇರೆ ಮಾಡಲು ಆಗಲ್ಲ. ಮುಕ್ತವಾಗಿ ಯಾವುದೇ ವ್ಯಕ್ತಿ ತಪ್ಪು, ಆಪಾದನೆ ಇಲ್ಲದಿದ್ದರೆ ಅವರು ಬದುಕಲು ಅವಕಾಶ ಇದೆ. ಕಾನೂನಿನ ಚೌಕಟ್ಟಿನಲ್ಲಿ ಅವರು ಬದುಕಲು ಅವಕಾಶ ಮಾಡಿಕೊಡೋಣ ಎಂದು ಹೇಳಿದರು.
ವೈಯಕ್ತಿಕ ಪ್ರಶ್ನೆ ಬರುವುದಿಲ್ಲ: ಒಕ್ಕಲಿಗ ಮೀಸಲಾತಿ ಹೆಚ್ಚಳ ಸೇರಿದಂತೆ ಹಲವು ಸಮುದಾಯಗಳ ಮೀಸಲಾತಿ ಬೇಡಿಕೆ ಇದೆ. ಎಲ್ಲರ ಬೇಡಿಕೆಯನ್ನೂ ಗಮನಕ್ಕೆ ತೆಗೆದುಕೊಂಡು ಕ್ರಮ ವಹಿಸುವ ಕೆಲಸ ಸರ್ಕಾರದಿಂದ ಆಗುತ್ತದೆ. ಇಲ್ಲಿ ನನ್ನ ವೈಯಕ್ತಿಕ ಪ್ರಶ್ನೆ ಬರುವುದಿಲ್ಲ. ಸರ್ಕಾರದಲ್ಲಿ, ಕಾನೂನಿನಲ್ಲಿ ಯಾವ ರೀತಿಯ ಅವಕಾಶಗಳಿವೆ ಎಂಬುದನ್ನು ನೋಡಿ ಕ್ರಮ ವಹಿಸುವ ಕೆಲಸ ಆಗುತ್ತದೆ. ಸರ್ಕಾರದಿಂದ ಜನರ ಭಾವನೆ ಮತ್ತು ಬೇಡಿಕೆಗಳನ್ನು ಯಾವ ರೀತಿ ಈಡೇರಿಸಲು ಸಾಧ್ಯವಿದೆಯೋ ಅದೆಲ್ಲವನ್ನೂ ಮಾಡೋಣ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಚಿಲುಮೆ ಕೇಸ್: ಮತ್ತೋರ್ವ ಆರೋಪಿ ಬಂಧನ.. ಬಂಧಿತರ ಸಂಖ್ಯೆ 12ಕ್ಕೆ ಏರಿಕೆ