ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಇಲಾಖೆಯಲ್ಲೂ ವರ್ಗಾವಣೆ ದಂಧೆ ಶುರುವಾಗಿದೆ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಲ್ಲಿಂದು ಮಾತನಾಡಿದ ಅವರು, ಶಿಫಾರಸು ಪತ್ರ ಎಲ್ರೂ ಕೊಡ್ತಾರೆ, ಆದ್ರೆ ಈ ಸರ್ಕಾರದಲ್ಲಿ ಶಿಫಾರಸು ಪತ್ರ ಆಧರಿಸಿ ವರ್ಗಾವಣೆ ನಡೆಯುತ್ತಿಲ್ಲ. ಇದರ ಬದಲು ಹಣದ ಆಧಾರದಲ್ಲಿ ವರ್ಗಾವಣೆ ನಡೀತಿದೆ. ಸತ್ಯಹರಿಶ್ಚಂದ್ರ ಥರ ಮಾತಾಡ್ತಾರೆ ಇವರು. ಆದರೆ ಹಣ ಪಡೆದೇ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ವರ್ಗ ಆಗಿರೋರು ಸರ್ಟಿಫೈಡ್ ಅಧಿಕಾರಿಗಳಾ?. ಇವರ್ಯಾರೂ ಭ್ರಷ್ಟಾಚಾರಿಗಳಲ್ಲ, ಭ್ರಷ್ಟಾಚಾರ ಮಾಡಲ್ಲ ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರಾ?. ಈ ಸರ್ಕಾರ ಮೊದಲ ದಿನದಿಂದಲೇ ಭ್ರಷ್ಟಾಚಾರ ಮತ್ತು ವರ್ಗಾವಣೆ ದಂಧೆ ನಡೆಸ್ತಿದ್ದಾರೆ. ಇದು ಮೋಸದ ಸರ್ಕಾರ, ಜನತೆಗೆ ಮೋಸ ಮಾಡಿ ಬಂದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದಿಂದ ತನಿಖಾಸ್ತ್ರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಕಾಲದ ಅಕ್ರಮ ಆರೋಪಗಳ ಬಗ್ಗೆ ಎಸ್‌ಐಟಿ ತನಿಖೆ ಮಾಡ್ತೀವಿ ಅಂದಿದ್ದಾರೆ. ತನಿಖೆ ಮಾಡಲಿ. ಆದ್ರೆ ನ್ಯಾಯಾಯಲಯ ಮಾನಿಟರ್ನಲ್ಲಿ ಎಸ್‌ಐಟಿ ರಚಿಸಲಿ. ಹಾಗೆಯೇ ಅವರ ಕಾಲದಲ್ಲೂ ಆಗಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಸಲಿ. ಕೋರ್ಟ್ ಮಧ್ಯಸ್ಥಿಕೆಯಡಿ ಎಸ್‌ಐಟಿ ರಚಿಸಿ. ಎಸ್‌ಐಟಿ ತನಿಖೆಯನ್ನು ನಾವು ಸ್ವಾಗತ ಮಾಡ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಈಗ ಮಾಡ್ತಿರುವ ತನಿಖೆಯ ಉದ್ದೇಶ ಒಳ್ಳೆಯದಲ್ಲ. ದ್ವೇಷ, ಕಿರುಕುಳ ಕೊಡೋಕೆ ತನಿಖೆ ಮಾಡಲು ಹೊರಟಿದ್ದಾರೆ. ಅವರ ಕಾಲದ ಹಗರಣಗಳ ತನಿಖೆ ಮಾಡಿ. ಇವರೆಲ್ಲ ಸತ್ಯ ಹರಿಶ್ಚಂದ್ರರು. ಈ ಸತ್ಯ ಹರಿಶ್ಚಂದ್ರರ ಕಾಲದ್ದು ತನಿಖೆ ಮಾಡಿದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡ್ತೇನೆ. ಗುತ್ತಿಗೆದಾರರಿಗೆ ಈಗ ಬಾಂಡಲಿಯಿಂದ ಬೆಂಕಿಗೆ, ಬೆಂಕಿಯಿಂದ ಬಾಂಡಲಿಗೆ ಬಿದ್ದಂತೆ ಆಗ್ತಾ ಇದೆ. ಈ ಸರ್ಕಾರದಲ್ಲಿ ಅವರ ಪರಿಸ್ಥಿತಿ ಈಗ ಹಾಗೆ ಇದೆ. ಸ್ಪಂದಿಸುವವರು ಬರ್ತಾರೆ ಅಂದರೆ ನಮ್ಮನ್ನೇ ನುಂಗುವವರು ಬಂದಿದ್ದಾರಲ್ಲಪ್ಪಾ ಎಂಬ ಸ್ಥಿತಿ ಗುತ್ತಿಗೆದಾರರದ್ದು. ಗುತ್ತಿಗೆದಾರರಿಗೆ ಏನು ಮಾಡಬೇಕು ಅಂತಾ ಗೊತ್ತಾಗುತ್ತಿಲ್ಲ ಎಂದರು.
ನಿನ್ನೆ ವೇದಿಕೆಯಲ್ಲಿ ಡಿಕೆಶಿ ಮತ್ತು ನೀವು ಏನು ಮಾತಾಡಿದ್ರಿ ಎಂಬ ಪ್ರಶ್ನೆಗೆ, ಬೆಂಗಳೂರಿಗೆ ತಾನು ಹೇಗೆ ಬಂದೆ ಎಂಬ ಹಳೆ ವಿಚಾರ ಹೇಳ್ತಾ ಇದ್ರು. ಬೆಂಗಳೂರು ನನಗೆ ಏನು ಸಂಬಂಧ ಎನ್ನೋದನ್ನು ಹೇಳ್ತಾ ಇದ್ರು. ನಾನು ಸುಮ್ನೆ ಕೇಳಿಸಿಕೊಳ್ತಾ ಇದ್ದೆ. ರಾಜಿ, ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ನಾವು ನಮ್ಮ ಸಿದ್ದಾಂತ ಮತ್ತು ಜನರಿಗೆ ಸಂಪೂರ್ಣ ಬದ್ಧ. ಹಾಗಂತ ನಾವು ನಮ್ಮ ವೈಯಕ್ತಿಕ ದ್ವೇಷ ತೋರಿಸಬೇಕು ಅಂತಾ ಅಲ್ಲ. ವಿಚಾರ ಆಧಾರಿತ, ಪಾರದರ್ಶಕ ಕೆಲಸ ಮಾಡುವವರಿಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದರು.
ಜನರ ರಕ್ತ ಹೀರುವವರಿಗೆ, ಸಮಾಜ ವಿರೋಧಿಗಳಿಗೆ, ತುಷ್ಟೀಕರಣ ರಾಜಕಾರಣ, ಸಂಸ್ಕೃತಿಗೆ ವಿರುದ್ಧವಾಗಿರುವವರನ್ನು ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಸಮಾಜ ದ್ರೋಹಿಗಳ ತರಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸ್ಥಾನ ವಿಚಾರವಾಗಿ ಮಾತನಾಡಿದ ಅವರು, ಪಕ್ಷದಲ್ಲಿ ಸಾಕಷ್ಟು ಅರ್ಹರು ಇದ್ದಾರೆ. ಯಾರಿಗೆ ಕೊಟ್ಟರೂ ಸ್ವೀಕರಿಸಲಾಗುವುದು, ಜೊತೆಗೆ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಚುನಾವಣಾ ಸೋಲಿಗೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ನೀಡಬೇಕಿತ್ತು ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಹಾಗೆ ಹೇಳುವುದು ತಪ್ಪಾಗುತ್ತದೆ. ಸೋತಾಗ ಯಾರನ್ನಾದರೂ ತೋರಿಸುವುದು ಸರಿಯಲ್ಲ. ಇದನ್ನು ಯಾರದೋ ಮೇಲೆ ಹೊರಿಸಲು ಆಗಲ್ಲ. ಎಲ್ಲರೂ ಕೂಡಿಯೇ ಸೋತಿರುವುದು. ರೇಣುಕಾಚಾರ್ಯ ಅವರು ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ಕಷ್ಟಕಾಲದಲ್ಲಿ ನಾವು ನಾವೇ ದೂಷಿಸಿಕೊಳ್ಳುವುದು ತಪ್ಪಾಗುತ್ತದೆ. ಏನೇ ತಪ್ಪಿದ್ದರೂ ಒಳಗೆ ಮಾತಾಡೋಣ ಎಂದರು.
ಇದನ್ನೂ ಓದಿ: ಸುಳ್ಳೇ ನಮ್ಮನೆ ದೇವರು ಎಂಬ ಮಾತು ಸಿದ್ದರಾಮಯ್ಯರಿಗೆ ಅನ್ವಯ: ಸಿ.ಟಿ.ರವಿ