ಬೆಂಗಳೂರು: ಭಯೋತ್ಪಾದನೆ ಚಟುವಟಿಕೆ ಮಾಡುವುದನ್ನ ನಮ್ಮ ಸರ್ಕಾರ ಮುಲಾಜಿಲ್ಲದೇ ಮಟ್ಟ ಹಾಕುತ್ತದೆ. ದೇಶ ವಿರೋಧಿ ಸಂಚು ಮಾಡಿದವರ ಕೃತ್ಯ ಸಾಬೀತಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪೊಲೀಸರು ಸಮರ್ಥವಾಗಿ ತನಿಖೆ ಮಾಡುತ್ತಿದ್ದಾರೆ. ಭಯೋತ್ಪಾದಕರ ಕೃತ್ಯ ಎಂದು ಸಾಬೀತಾಗಿದೆ. ಇದರ ಜಾಲ ದೇಶದ ಯಾವೆಲ್ಲ ಭಾಗದಲ್ಲಿ ಇದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ತನಿಖೆ ನಡೆಯುತ್ತಿರುವುದರಿಂದ ಇದರ ಹಿಂದೆ ಯಾರಿದ್ದಾರೆ ಅಂತ ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಈ ಪಿಡುಗನ್ನು ಮಟ್ಟಹಾಕಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಗೆಲ್ಲುವ ಸೇಫ್ ಪ್ಲೇಸ್ ಎಲ್ಲೂ ಇಲ್ಲ: ಸಿದ್ದರಾಮಯ್ಯ ಹಾಕಿರುವ ಅರ್ಜಿಯಲ್ಲಿ ಕ್ಷೇತ್ರದ ಉಲ್ಲೇಖ ಆಗದ ವಿಚಾರ ಕುರಿತು ಕರ್ನಾಟಕದಲ್ಲಿ ಸಿದ್ದರಾಮಯ್ಯ ಗೆಲ್ಲುವ ಸೇಫ್ ಪ್ಲೇಸ್ ಎಲ್ಲೂ ಇಲ್ಲ. ಅವರು ಬೇರೆ ರಾಜ್ಯ ಹುಡುಕಿಕೊಳ್ಳೋದು ಸೇಫ್. ಅವರು ಹುಟ್ಟಿ, ಬೆಳೆದ ಜಾಗದಲ್ಲಿ ಕೂಡ ಜನ ತಿರಸ್ಕರಿಸಿದ್ದಾರೆ ಎಂದು ಸಚಿವ ಆರ್ ಅಶೋಕ್ ಲೇವಡಿ ಮಾಡಿದರು.
ಬಾದಾಮಿ ಸವಿಯೋಕೆ ಅಂತ ಬಾದಾಮಿಗೆ ಹೋದರು, ಈಗ ಕೋಲಾರದಲ್ಲಿ ಮುನಿಯಪ್ಪ ಕೂಡ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ವಾಪಸ್ ಮರಳಿ ಮನೆಗೆ ಅಂತ ಹೊರಟಿದ್ದಾರೆ ಎಂದರು.
ಸ್ವಪಕ್ಷೀಯ ಶತ್ರು ಸಂಹಾರ ಯಾಗ ಮಾಡಬೇಕು: ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯ ನೆಗಲೆಕ್ಟ್ ಮಾಡಿದ್ದಾರೆ. ಅವರಿಗೆ ಬಿಜೆಪಿ, ಜೆಡಿಎಸ್ ಭಯವಿಲ್ಲ ಸ್ವಪಕ್ಷೀಯರೇ ಅವರಿಗೆ ಭಯ. ಅವರು ಅನೇಕರ ಸೋಲಿಗೆ ಕಾರಣವಾಗಿದ್ದರು ಅಂತ ಆರೋಪವಿದೆ. ಹಿಂದೆ ಪರಮೇಶ್ವರ್ ನಾನೇ ಸಿಎಂ ಅಂತಿದ್ದರು ಅವರನ್ನೇ ಸೋಲಿಸಿದರು. ಈಗ ಸ್ವಪಕ್ಷೀಯರೇ ಅವರನ್ನ ಸೋಲಿಸ್ತಾರೆ ಅನ್ನೋ ಭಯ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ನಾನೇ ಅಂದವರನ್ನು ಪಕ್ಷದವರೇ ಸೋಲಿಸುತ್ತಾರೆ ಎಂದು ಅಶೋಕ್ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ವಿಜಯೇಂದ್ರ ನಿಲ್ಲಿಸೋ ವಿಚಾರ ಮಾತನಾಡಿ, ವರುಣಾದಲ್ಲಿ ಯಾರನ್ನ ನಿಲ್ಲಿಸಬೇಕು ಅನ್ನುವುದನ್ನು ನಿರ್ಧರಿಸಲು ನಮ್ಮಲ್ಲಿ ಚುನಾವಣಾ ಮಂಡಳಿ ಇದೆ. ಯಡಿಯೂರಪ್ಪಕೂಡ ಅದರಲ್ಲಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಗೆಲ್ಲುವ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ. ಈಗ ಅವರು ಸ್ವಪಕ್ಷೀಯ ಶತ್ರು ಸಂಹಾರ ಯಾಗ ಮಾಡಬೇಕು ಎಂದರು.
ಇನ್ನು ಸಿಎಂ ಬೊಮ್ಮಾಯಿ ಕೂಡ ಕ್ಷೇತ್ರ ಹುಡುಕ್ತಿದ್ದಾರೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಮಾತ್ರ ಹುಡುಕ್ತಿದ್ದಾರೆ. ನಮ್ಮ ಸಿಎಂ ಅಲ್ಲೇ ಸ್ಪರ್ಧೆ ಮಾಡ್ತಾರೆ, ಅಲ್ಲೇ ಗೆಲ್ತಾರೆ. ವೋಟರ್ ಐಡಿ ಪ್ರಕರಣದಲ್ಲಿ ಕಾಂಗ್ರೆಸ್ ಯುದ್ಧಕ್ಕೆ ಬರುವ ಮೊದಲೇ ಸೋಲು ಒಪ್ಪಿಕೊಂಡಿದ್ದಾರೆ. ಆಗ ಇವಿಎಂ ಸರಿ ಇಲ್ಲ ಅಂತಿದ್ದರು. ಈಗ ಜಾಗೃತಿ ಮೂಡಿಸೋದು ಸರಿ ಇಲ್ಲ ಅಂತಿದ್ದಾರೆ.
ನಮ್ಮ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಹೆದರಿದೆ: ಎಸ್ಸಿ ಎಸ್ಟಿ ರಿಸರ್ವೇಷನ್, ಕೆಂಪೇಗೌಡರ ಪುತ್ಥಳಿ ಅನಾವರಣ ಅನೇಕ ನಮ್ಮ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಹೆದರಿದೆ. ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ ಅಶೋಕ್ ತಿರುಗೇಟು ನೀಡಿದರು
ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಕಂದಾಯ ಸಚಿವರು, ಚಿಲುಮೆ ಸಂಸ್ಥೆಗೆ 2013ರಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ಕೊಟ್ಟಿದ್ದಾರೆ. ಆಗ ಯಾಕೆ ತನಿಖೆ ಮಾಡಲಿಲ್ಲ, ಡಿಕೆಶಿ, ಸಿದ್ದರಾಮಯ್ಯ ಏನು ಮಾಡುತ್ತಿದ್ದರು? ರಾಜ್ಯದ ನಾಗರಿಕರಿಗೆ ಗೌರವ ಕೊಡ್ತೀವಿ, ಬೆಲೆ ಕೊಡ್ತೀವಿ. ಅವರು ಕೇಳಿದರೆ ಉನ್ನತ ಮಟ್ಟದ ತನಿಖೆ ಕೊಡುತ್ತೇವೆ,
ಆದರೆ ಇಲ್ಲಿ ಕೇಳ್ತಿರೋದು ಕಾಂಗ್ರೆಸ್‌ನವರು, ಕಾಂಗ್ರೆಸ್‌ನವರು ಚುನಾವಣೆ ಬರುತ್ತಿರುವುದರಿಂದ ದಿನಕ್ಕೊಂದು ಗಾಳಿಯಲ್ಲಿ ಗುಂಡು ಹೊಡೀತಿದ್ದಾರೆ. ನಾನು ಅಶ್ವತ್ಥ ನಾರಾಯಣ್ ಜೊತೆ ಮಾತನಾಡಿದ್ದೇನೆ. ಆ ರೀತಿ ಯಾವುದೇ ಘಟನೆ ನಡೆದಿಲ್ಲ. ಇದೆಲ್ಲ ಹತಾಶಗೊಂಡ ಕಾಂಗ್ರೆಸ್ ನ ಮನಸ್ಥಿತಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ