ಬೆಂಗಳೂರು: ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಇದರ ಸಮರ್ಪಕ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಬೇಕೆಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ.
ಆನೆ ಹಾವಳಿ ಸಂಬಂಧ ಮಲೆನಾಡಿನ ಶಾಸಕರು ವ್ಯಕ್ತಪಡಿಸಿದ ಆತಂಕಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್, ಇಡೀ ರಾಜ್ಯದ ಹಲವು ಜಿಲ್ಲೆಗಳ ಸಮಸ್ಯೆ ಇದಾಗಿದೆ ಎಂದರು. ಕೆಲವು ಕಡೆಗಳಲ್ಲಿ ಆನೆಗಳು, ಇನ್ನು ಕೆಲವು ಕಡೆ ಮಂಗಗಳು, ಕಾಡು ಕೋಣಗಳ ಹಾವಳಿಯಿಂದ ಸಮಸ್ಯೆಗಳು ಮುಂದುವರಿಯುತ್ತಲೇ ಇವೆ. ಆನೆ ದಾಳಿಯಿಂದ ಸತ್ತವರಿಗೆ ದುಪ್ಪಟ್ಟು ಪರಿಹಾರ ಹಾಗೂ ಬೆಳೆ ಹಾನಿಗೂ ದುಪ್ಪಟ್ಟು ಪರಿಹಾರ ನೀಡಲು ಸರ್ಕಾರ ನಿರ್ಧರಿಸಿರುವುದು ಒಳ್ಳೆಯದು.
ಆದರೇ, ಇದಕ್ಕೊಂದು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಲ್ಲವೇ? ಮೂಡಿಗೆರೆಯಲ್ಲಿ ಆನೆಗಳನ್ನು ಹಿಡಿದು ಚಾಮರಾಜನಗರದಲ್ಲಿ ಬಿಟ್ಟು ಬರುವುದು; ಅಲ್ಲಿ ಮಂಗಗಳನ್ನು ಹಿಡಿದು ಉತ್ತರ ಕನ್ನಡಕ್ಕೆ ತಂದು ಬಿಡುವುದು. ಹೀಗಾದರೆ ಹೇಗೆ? ಇದು ನಮ್ಮಗಳ ಕೈಯಲ್ಲಿ ಇಲ್ಲದ ಸಮಸ್ಯೆ. ಆದ್ದರಿಂದ ಕೂಡಲೇ ತಜ್ಞರ ಸಮಿತಿಯನ್ನು ರಚಿಸಿ ಅಧ್ಯಯನ ವರದಿ ತರಿಸಿಕೊಂಡು ಶಾಶ್ವತ ಕ್ರಮ ತೆಗೆದುಕೊಳ್ಳಿ ಎಂದರು.
ನನ್ನ ಕ್ಷೇತ್ರದಲ್ಲೂ ಕಾಡು ಕೋಣಗಳು ಮನೆಗಳಲ್ಲಿಯೇ ಓಡಾಡುತ್ತಿರುವ ವಿಡಿಯೋ ಬಂದಿದೆ. ಇಂತಹ ಸಮಸ್ಯೆಗಳಿಗೆ ಕೂಡಲೇ ಏನಾದರೂ ಮಾಡಿ ಎಂದು ಸ್ಪೀಕರ್ ಸೂಚಿಸಿದರು. ಮುಖ್ಯಮಂತ್ರಿಗಳ ಪರವಾಗಿ ಕಾರ್ಮಿಕ ಸಚಿವ ಅರಬೈಲ ಶಿವರಾಮ್ ಹೆಬ್ಬಾರ್ ಅವರು ಸ್ಪೀಕರ್ ಅವರ ಸೂಚನೆ ಪಾಲಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅರಬೈಲ ಶಿವರಾಮ ಹೆಬ್ಬಾರ್, ಆನೆ ಹಾವಳಿಯಿಂದ ಮಾನವ ಹಾನಿ ಮತ್ತು ಬೆಳೆಗಳಿಗೆ ಹಾನಿಯಾಗುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದ್ದು, ಮೂಡಿಗೆರೆಯಲ್ಲಿ ವ್ಯಾಪಕ ತೊಂದರೆ ಕೊಡುತ್ತಿರುವ ಮೂಡಿಗೆರೆ ಬೈರಾ ಎಂಬ ಆನೆಯನ್ನು ಗುರುತಿಸಿ ಸೆರೆ ಹಿಡಿದು ಕಾಡಿಗೆ ಸ್ಥಳಾಂತರ ಮಾಡಲು ಆದೇಶಿಸಲಾಗಿದೆ. ಈಗಾಗಲೇ ಕಾರ್ಯಾಚರಣೆ ನಡೆಯುತ್ತಿದೆ ಎಂದರು.
ಅಲ್ಲದೇ ರಾಜ್ಯದಲ್ಲಿ ಆನೆ ಹಾವಳಿಗೆ ಪ್ರಾಣ ತೆತ್ತಿರುವ ವ್ಯಕ್ತಿಗಳ ಕುಟುಂಬಕ್ಕೆ ಈಗಿರುವುದಕ್ಕಿಂತ ದುಪ್ಪಟ್ಟು ಪರಿಹಾರ ನೀಡಲಾಗುತ್ತದೆ. ಬೆಳೆ ನಷ್ಟಕ್ಕೂ ದುಪ್ಪಟ್ಟು ಪರಿಹಾರ ನೀಡಲು ನಿರ್ಧರಿಸಲಾಗಿದೆ. ಆನೆ ಕಾರಿಡಾರ್ ಯೋಜನೆ ಪ್ರಸ್ತಾವನೆ ಸದ್ಯಕ್ಕಿಲ್ಲ. ಆದರೆ, ಶಾಶ್ವತ ತಡೆ ಬೇಲಿ ನಿರ್ಮಾಣದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಕಾಂಗ್ರೆಸ್-ಜೆಡಿಎಸ್ ಸದಸ್ಯರ ಆಕ್ಷೇಪ: ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಶಿಕ್ಷಣದ ಬಗ್ಗೆ ಶಾಸಕರು ಮಾತನಾಡಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿಧಾನಸಭೆಗೆ ತಿಳಿಸಿದಾಗ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಕೆ.ಎಸ್.ಲಿಂಗೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂಜನಿಯರಿಂಗ್ ಕಾಲೇಜು ಬೇಕೆಂಬ ಬೇಡಿಕೆಯನ್ನು ಶಾಸಕರು ಇಡುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಇಲಾಖೆ ಬಗ್ಗೆ ಚರ್ಚಿಸಲು ಆಸಕ್ತಿಯೇ ತೋರಲಿಲ್ಲ. ಶಿಕ್ಷಣಕ್ಕಿಂತ ಬೇರೆ ದಾರಿ ಇದೆಯೇ ಎಂದು ಪ್ರಶ್ನಿಸಿದರು.
ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್, ನೀವು ಏನು ಮಾಡುತ್ತಿದ್ದೀರಿ, ಸಚಿವರಾಗಿ ಅಸಹಾಯಕತೆ ವ್ಯಕ್ತಪಡಿಸುತಿದ್ದಿರಲ್ಲಾ ಎಂದು ಛೇಡಿಸಿದರು. ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ಹಾಗೂ ವೆಂಕಟರಾವ್ ನಾಡಗೌಡ ಅವರು, ಸಚಿವರಾಗಿ ನೀವು ಅಗತ್ಯ ಅನುದಾನ ತರಬೇಕಲ್ಲವೇ ಎಂದರು. ರಾಜ್ಯದಲ್ಲಿ 16 ಸರ್ಕಾರಿ ಇಂಜಿನಿಯರ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು, 3,670 ಸೀಟುಗಳು ಲಭ್ಯವಿದೆ. ಭರ್ತಿಯಾಗಿರುವುದು 2,086 ಸೀಟುಗಳು ಮಾತ್ರ ಪೂರ್ಣ ಪ್ರಮಾಣದ ಸೀಟುಗಳು ಭರ್ತಿಯಾಗುತ್ತಿಲ್ಲ.
ಹೀಗಾಗಿ ಬೇಲೂರು ತಾಲ್ಲೂಕಿನಲ್ಲಿ ಹೊಸ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಆರಂಭಿಸುವುದಿಲ್ಲ ಎಂದು ಹೇಳಿದರು. ಅತ್ಯುತ್ತಮ ಗುಣಮಟ್ಟದ ಬೋಧನೆ ಕಲಿಕೆಗಳಿಗೆ ಹಾಗೂ ಸಂಶೋಧನೆಗೆ ಉತ್ತೇಜಿಸಲು ಹಾಸನ, ಹಾವೇರಿ, ಕೆ.ಆರ್.ಪೇಟೆ, ತಳಕಲ್, ಕಾರವಾರ ಹಾಗೂ ಬೆಂಗಳೂರಿನ ಎಸ್‍ಕೆಎಸ್, ಜೆಐಟಿ ಎಂಜನೀಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳನ್ನಾಗಿ ಉನ್ನತೀಕರಿಸಲು ಪ್ರತಿಷ್ಠಿತ ವಿದೇಶಿ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಈ ಯೋಜನೆ ಜಾರಿಯಾಗಿ ಶೈಕ್ಷಣಿಕ ತಜ್ಞರ ಕಾರ್ಯಪಡೆ ರಚಿಸಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ತಲಾ ಒಂದು ಮಾದರಿ ಎಂಜನಿಯರಿಂಗ್ ಕಾಲೇಜುಗಳನ್ನು ಉತ್ಕೃಷ್ಟ ಗುಣಮಟ್ಟಕ್ಕೇರಿಸಲು ಯೋಜನೆಯ ಪರಿಕಲ್ಪನೆಯಡಿ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದರು. ಈ ವೇಳೆ ಮಾತನಾಡಿದ ಶಾಸಕ ಲಿಂಗೇಶ್, ನಾವು ಹೊಯ್ಸಳ ಸಾಮ್ರಾಜ್ಯದವರು. ರಾಜ್ಯದ ಬೇರೆ ಕಡೆ ಹೊಸ ಇಂಜನಿಯರ್ ಕಾಲೇಜು ನೀಡಿದರೆ ನಮಗೂ ನೀಡಬೇಕು ಎಂದಾಗ, ನಾವು ಗಂಗಾ ಸಾಮ್ರಾಜ್ಯದಿಂದ ಬಂದವರು, ಒಬ್ಬೊಬ್ಬರು ಒಂದೊಂದು ಸಾಮ್ರಾಜ್ಯದಿಂದ ಬಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಬಿಎಂಎಸ್ ಶಿಕ್ಷಣ ಟ್ರಸ್ಟ್ ಬಗ್ಗೆ ಉತ್ತರ ನೀಡದ ಅಶ್ವತ್ಥನಾರಾಯಣ ವಿರುದ್ಧ ಜೆಡಿಎಸ್ ಕೆಂಡ.. ಸಿಎಂ ಭರವಸೆ ನಂತರ ಧರಣಿ ವಾಪಸ್