ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಣ ರಾಜಕೀಯ ತಾರ್ಕಿಕ ಅಂತ್ಯಕ್ಕೆ ಬರುತ್ತಿದ್ದು, ಗುಂಪುಗಾರಿಕೆಗೆ ಅವಕಾಶವಿಲ್ಲ, ಯಾರೂ ಶಕ್ತಿಪ್ರದರ್ಶನಕ್ಕೆ ಮುಂದಾಗುವಂತಿಲ್ಲ. ಏನೇ ಹೇಳುವುದಿದ್ದರೂ ಪ್ರತ್ಯೇಕವಾಗಿಯೇ ಬಂದು ಹೇಳಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಬಿಎಸ್ವೈ ಪರ-ವಿರೋಧಿ ಬಣದ ಶಾಸಕರಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಯಡಿಯೂರಪ್ಪ ವಿರೋಧಿ ಬಣದವರೇ ಆಗಲಿ, ಪರ ಇರುವ ಬಣದವರೇ ಆಗಲಿ ಗುಂಪು ಸೇರಿ ಸಭೆ ಮಾಡುವಂತಿಲ್ಲ, ಗುಂಪಾಗಿ ಆಗಮಿಸಿ ತಮ್ಮನ್ನು ಭೇಟಿಯಾಗುವಂತಿಲ್ಲ. ಯಾರು ಬೇಕಾದರೂ ಪ್ರತ್ಯೇಕವಾಗಿ ಬಂದು ಭೇಟಿ ಮಾಡಿ ವೈಯಕ್ತಿಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು ಎನ್ನುವ ಸೂಚನೆ ನೀಡಿದ್ದಾರೆ.
ಏನೇ ಸಮಸ್ಯೆಗಳಿದ್ದರೂ ಹೇಳುವುದಕ್ಕೆ ಅವಕಾಶ ನೀಡಲಾಗುತ್ತದೆ, ಆದರೆ ಭೇಟಿ ನಂತರ ಮಾಧ್ಯಮಗಳಿಗೆ ಚರ್ಚೆ ಕುರಿತು ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದ್ದಾರೆ. ರಾಜ್ಯ ಉಸ್ತುವಾರಿಯ ಈ ಸೂಚನೆಯುಂದಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ಎರಡು ಬಣಗಳಿಗೆ ತೀವ್ರ ಹಿನ್ನೆಡೆಯಾಗಿದೆ. ಈಗಾಗಲೇ ಯಡಿಯೂರಪ್ಪ ನಾಯಕತ್ವದ ಪರ 65 ಶಾಸಕರ ಸಹಿ ಇರುವ ಪತ್ರದಿಂದಿಗೆ ಶಾಸಕರ ತಂಡವನ್ನು ಕಟ್ಟಿಕೊಂಡು ಅರುಣ್ ಸಿಂಗ್ ಅವರನ್ನು ಭೇಟಿ ಮಾಡಲು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನಿರ್ಧರಿಸಿದ್ದರು.
ಅದೇ ರೀತಿ ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಕೆಲ ಶಾಸಕರು ಒಟ್ಟಾಗಿ ಅರುಣ್ ಸಿಂಗ್ ಭೇಟಿಯಾಗಿ ನಾಯಕತ್ವದ ವಿರುದ್ಧ ಅಭಿಪ್ರಾಯ ಸಲ್ಲಿಸಿ ವಿರೋಧಿ ಬಣದ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು.