ಬೆಂಗಳೂರು: ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಿರೀಕ್ಷೆಯಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವಕ್ಕೆ ಬೆಂಬಲ ಸೂಚಿಸಿದ್ದು, ಸಿಎಂ ವಿರುದ್ಧ ಹೇಳಿಕೆ ನೀಡಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ನಾಯಕತ್ವ ಬದಲಾವಣೆ ವದಂತಿ ಹಿನ್ನೆಲೆ ಹೈಕಮಾಂಡ್ ಪ್ರತಿನಿಧಿಯಾಗಿ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮೂರು ದಿನಗಳ ಕಾಲ ಸರಣಿ ಸಭೆ ನಡೆಸಿ ಬಂದ ಕೆಲಸ ಮುಗಿಸಿ ನವದೆಹಲಿಗೆ ವಾಪಸ್ ಆದರು. ನಿರೀಕ್ಷೆಯಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ಪರ ನಿಷ್ಠರಾಗಿರುವಂತೆ ಭಿನ್ನರಿಗೆ ಸೂಚಿಸಿ, ಉಳಿದವರಿಗೂ ಪಕ್ಷ ಮತ್ತು ಸರ್ಕಾರದ ವಿರುದ್ಧ ದನಿ ಎತ್ತದಂತೆ ಖಡಕ್ ಸಂದೇಶ ರವಾನಿಸಿದ್ದಾರೆ.
ಮೊದಲ ದಿನ ಸಚಿವರ ಸಭೆ ನಡೆಸಿದ್ದ ಅರುಣ್ ಸಿಂಗ್ ಸಚಿವರಿಂದ ಅಭಿಪ್ರಾಯ ಸಂಗ್ರಹಿಸಿ, ವದಂತಿಗೆ ಕಾರಣಗಳ ಕುರಿತು ಸಮಾಲೋಚನೆ ನಡೆಸಿದ್ದರು. ಮಾರನೇ ದಿನ ಶಾಸಕರ ಜೊತೆ ಒನ್ ಟು ಒನ್ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದರು.
ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿದ್ದ ಅರುಣ್ ಸಿಂಗ್ ಇಂದು ಕೋರ್ ಕಮಿಟಿ ಸಭೆ ನಡೆಸಿ, ಭಿನ್ನಮತೀಯರಿಗೆ ಶಿಸ್ತು ಉಲ್ಲಂಘನೆ ಮಾಡದಂತೆ ತಾಕೀತು ಮಾಡಿದ್ದಾರೆ. ಪಕ್ಷದ ವೇದಿಕೆಯಲ್ಲಿ ಮಾತ್ರವೇ ಆಂತರಿಕ ವಿಷಯ ಚರ್ಚೆಯಾಗಬೇಕು. ಬಹಿರಂಗ ಚರ್ಚೆಗೆ ಯಾರೇ ಮುಂದಾದರೂ ಕ್ರಮ ಕೈಗೊಳ್ಳಲಾಗುತ್ತದೆ. ಇದು ಈಗ ದನಿ ಎತ್ತಿರುವವರಿಗೂ ಅನ್ವಯವಾಗಲಿದೆ ಎಂದು ಯಡಿಯೂರಪ್ಪ ವಿರುದ್ಧ ನಿಂತವರಿಗೆ ಶಾಕ್ ನೀಡಿದ್ದಾರೆ.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಇಲ್ಲ, ದನಿ ಎತ್ತಿದವರ ವಿರುದ್ಧ ಕ್ರಮ ; ಬಿಜೆಪಿ ಕೋರ್ ಕಮಿಟಿಯಲ್ಲಿ ನಿರ್ಧಾರ
ಈ ಕುರಿತು ಮಾತನಾಡಿದ ಅರುಣ್ ಸಿಂಗ್, ಬಿಜೆಪಿಯಲ್ಲಿನ ಗೊಂದಲದಿಂದ ಕಾರ್ಯಕರ್ತರಿಗೆ ನೋವುಂಟಾಗುತ್ತದೆ. ಹೀಗಾಗಿ ಪಕ್ಷ ವಿರೋಧಿ ಹೇಳಿಕೆ ನೀಡದಂತೆ ಹೇಳಲಾಗಿದೆ. ಇಬ್ಬರು, ಮೂವರು ಮಾತ್ರ ವೈರುಧ್ಯ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ವಿಶ್ವದಲ್ಲೇ ಅತಿದೊಡ್ಡ ಪಕ್ಷವೆಂಬುದು ನೆನಪಿರಲಿ, ಮಾತನಾಡುವುದಿದ್ದರೆ ಕಾಂಗ್ರೆಸ್, ವಿಫಲ ನಾಯಕರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಮಾತನಾಡಿ. ಪಕ್ಷದ ಬಗ್ಗೆ ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆಯಾಗಲಿ. ಸದ್ಯ ನಾಲ್ಕೈದು ಮಂದಿ ವಿರೋಧ ಹೇಳಿಕೆ ಕೊಡುವರು ಇದ್ದಾರೆ. ಪಕ್ಷದ ವಿರುದ್ಧ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅರುಣ್ ಸಿಂಗ್ ಖಡಕ್ ಸೂಚನೆ ನೀಡಿ ಸಿಎಂಗೆ ಬಹು ಪರಾಕ್ ಹೇಳಿದ್ದಾರೆ.