ಬೆಂಗಳೂರು: ಊಟದ ವಿಚಾರಕ್ಕಾಗಿ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಪೀಠೋಪಕರಣ ಧ್ವಂಸಗೊಳಿಸಿ ದಾಂಧಲೆ ನಡೆಸಿದ್ದ ಆರು ಮಂದಿ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಲೋಹಿತ್, ನಿಖಿತ್, ವಿನಯ್, ಭರತ್, ಕೀರ್ತಿ ಬಂಧಿತರು. ಇವರೆಲ್ಲರೂ ಮಾಳಗಾಳದಲ್ಲಿರುವ ದೊನ್ನೆ ಬಿರಿಯಾನಿ ಹೊಟೇಲ್ಗೆ 29ರಂದು ಸಂಜೆ ಬಂದಿದ್ದಾರೆ. ಬಿರಿಯಾನಿ ಆರ್ಡರ್ ಮಾಡಿದಾಗ ಮೊದಲು ಆರ್ಡರ್ ಮಾಡಿದ್ದ ಗುಂಪಿಗೆ ಊಟ ಸರ್ವೀಸ್ ಮಾಡಲಾಗಿದೆ. ಇದರಿಂದ ಕೆರಳಿದ ಆರೋಪಿಗಳ ತಂಡ ಹೊಟೇಲ್ ಸಿಬ್ಬಂದಿ ಮೇಲೆ ಕಿಡಿಕಾರಿದೆ.
ಮಾತಿಗೆ ಮಾತಿಗೆ ಮಾತು ಬೆಳೆದು ಕೊನೆಗೆ ಮಾತು ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಇದೇ ವೇಳೆ ಎರಡು ಗುಂಪಿನ ಸದಸ್ಯರು ಅಲ್ಲಿದ್ದ ಬಾಟಲ್, ಕುರ್ಚಿ, ಟೇಬಲ್ಗಳಿಂದ ಹೊಡೆದಾಡಿಕೊಂಡಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಹೊಟೇಲ್ ಮಾಲೀಕ ಹರೀಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.