ಬೆಂಗಳೂರು: ಕಂಪನಿಯ ದತ್ತಾಂಶ ಕದ್ದು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಆರೋಪದಡಿ ಓರ್ವನನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕಗ್ಗಲಿಪುರದ ಕಾಮಿನ್ ಪ್ರಜಾಪತಿ ಬಂಧಿತ ಆರೋಪಿ. ಈತ 2017ರಿಂದ 2019ರವರೆಗೆ ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ಅಕೌಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಕಂಪನಿಯ ದತ್ತಾಂಶ ಕದ್ದು, ಗ್ರಾಹಕರ ಮಾಹಿತಿಯಾದ ಬ್ಯಾಂಕ್ ವಿವರ, ಕ್ರೆಡಿಟ್ ಕಾರ್ಡ್, ಪೇ ರೋಲ್, ಕಟ್ಟಡ ಮಾಹಿತಿ ಸೇರಿದಂತೆ ಇತರೆ ಮಾಹಿತಿ ಪಡೆದುಕೊಳ್ಳುತ್ತಿದ್ದ. ಬಳಿಕ ಅವನ್ನು ತನ್ನ ವೈಯಕ್ತಿಕ ಮೇಲ್‌ಗೆ ಹಾಕಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ 1 ಲ್ಯಾಪ್‌ಟ್ಯಾಪ್, ಸಿಪಿಯು, ಮೊಬೈಲ್ ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.