ಬೆಂಗಳೂರು : ವೈಯಕ್ತಿಕ ದ್ವೇಷ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿದ್ದಲ್ಲದೇ ಪೆಟ್ರೋಲ್ ಬಾಂಬ್ ಸೇರಿದಂತೆ ಮಾರಕಾಸ್ತ್ರ ಸಂಗ್ರಹಿಸುತ್ತಿದ್ದ ಆರೋಪದಡಿ ಮೂವರು ಖದೀಮರನ್ನು ಇಲ್ಲಿನ ಹೆಣ್ಣೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಮಸೀದಿಗೆ ದಲಿತ ಸಂಘಟನೆ ಕಾವಲು : 20ಕ್ಕೂ ಅಧಿಕ ಶ್ರೀರಾಮ ಸೇನೆ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಸಾರಾಯಿಪಾಳ್ಯ ನಿವಾಸಿ ಹಾಗೂ ರೌಡಿಶೀಟರ್ ಮೊಹಮ್ಮದ್ ಅಜಿಮುದ್ದೀನ್ ಅಲಿಯಾಸ್ ಬಾಬು ಮೇಲಿದ್ದ ಹಳೆ ದ್ವೇಷ ತೀರಿಸಿಕೊಳ್ಳಲು ಹಾಗೂ ಸಮಾಜಘಾತುಕ ಕೃತ್ಯ ಎಸಗಲು ಸಿದ್ದತೆ ಮಾಡಿಕೊಂಡಿದ್ದ ಆರೋಪಿಗಳಾದ ಮುಖ್ಯ ಆರೋಪಿ ಫಯಾಜ್ ಸಹಚರರಾದ ಸೈಯದ್ ಅಸ್ಗರ್ ಹಾಗೂ ಮುನ್ನಾವರ್ ಎಂಬುವರನ್ನು ಬಂಧಿಸಿ, ಒಂದು ನಾಡ ಪಿಸ್ತೂಲ್, ಜೀವಂತ ಗುಂಡು, 10 ಪೆಟ್ರೋಲ್ ಬಾಂಬ್ಗಳು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿಗಳೆಲ್ಲರೂ ಹೆಗಡೆನಗರ ನಿವಾಸಿಗಳಾಗಿದ್ದಾರೆ. ಹೆಣ್ಣೂರು ಠಾಣೆ ರೌಡಿಶೀಟರ್ ಮೊಹಮ್ಮದ್ ಅಜಿಮುದ್ದೀನ್ ಕೆಲ ದಿನಗಳ ಹಿಂದೆ ಆರೋಪಿ ಫಯಾಜ್ ವಾಸವಾಗಿದ್ದ ಮನೆಯನ್ನ ಬೇರೆಯವರಿಗೆ ಮಾರಾಟ ಮಾಡಿದ್ದರೂ ಮನೆ ಖಾಲಿ ಮಾಡಿರಲಿಲ್ಲವಂತೆ. ಹೀಗಾಗಿ, ಮೊಹಮ್ಮದ್ ಬಲವಂತವಾಗಿ ಖಾಲಿ ಮಾಡಿಸಿ ಅವಮಾನ ಮಾಡಿದ್ದನಂತೆ. ಅಲ್ಲದೆ ಆಗಾಗ ಈತನಿಗೆ ಆರೋಪಿಯ ಸಹಚರರು ತೊಂದರೆ ಕೊಡುತ್ತಿದ್ದರಂತೆ. ಇದರಿಂದ ಅಸಮಾಧಾನಗೊಂಡಿದ್ದ ಫಯಾಜ್, ಹಳೆ ದ್ವೇಷ ತೀರಿಸಿಕೊಳ್ಳಲು ಆಸ್ಗರ್ ಹಾಗೂ ಮುನ್ನಾವರ್ ಜತೆ ಮಾತುಕತೆ ನಡೆಸಿದ್ದ.
ಅದಲ್ಲದೇ ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ಲ್ಯಾನ್ ಮಾಡಿಕೊಂಡ ಆರೋಪಿಗಳು ನಾಡಪಿಸ್ತೂಲ್, ಬಿಯರ್ ಬಾಟೆಲ್ಗಳನ್ನು ಗುಪ್ತವಾಗಿ ಸಂಗ್ರಹಿಸಿ ಫಯಾಜ್ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೂರ್ವ ವಿಭಾಗದ ಪೊಲೀಸರು ವಿಶೇಷ ತಂಡಗಳನ್ನ ರಚಿಸಿ ಮೂವರು ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿಪಿ ಭೀಮಾಶಂಕರ್ ಗುಳೇದ್, ಆರೋಪಿಗಳಿಗೆ ಸೇರಿದ್ದ ಮನೆಯನ್ನು ರೌಡಿಶೀಟರ್ ಮೊಹಮ್ಮದ್ ಫಯಾಜ್ ಖಾಲಿ ಮಾಡಿಸಿದ್ದ. ಇದರಿಂರ ಫಯಾಜ್ ₹10 ಲಕ್ಷ ಹಣ ಕಳೆದುಕೊಂಡಿದ್ದ. ಈ ಕಾರಣಕ್ಕೆ ಬಾಬು ಮೇಲಿನ ಸೇಡಿಗೆ ಆರೋಪಿಗಳು ಪ್ಲಾನ್ ಮಾಡಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಜಾನ್-ಭಜನೆ ಸಂಘರ್ಷ: ಸಿಎಂ ಭೇಟಿ ಮಾಡಿದ ಕಾಂಗ್ರೆಸ್ ಮುಸ್ಲಿಂ ಶಾಸಕರ ನಿಯೋಗ
ಇನ್ನು ಹಿಂದೂ ಕಾರ್ಯಕರ್ತರ ಕೊಲೆಗೆ ಸಂಚು ಎಂದು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಪಿ, ಆರೋಪಿಗಳ ದುಷ್ಕೃತದ ಹಿಂದೆ ಯಾವುದೇ ರೀತಿಯ ಪ್ಲ್ಯಾನ್ ಇರಲಿಲ್ಲ. ಅಲ್ಲದೆ ಹಿಂದೂ ಕಾರ್ಯಕರ್ತರ ಹತ್ಯೆ ಅಥವಾ ಗಲಭೆಯ ಉದ್ದೇಶ ಹೊಂದಿರಲಿಲ್ಲ ಎಂದಿದ್ದಾರೆ.