ಬೆಂಗಳೂರು: ಮುತ್ತೂಟ್ ಫೈನಾನ್ಸ್ನಲ್ಲಿ ಸಿನಿಮೀಯ ರೀತಿ ನಡೆದ ಕಳ್ಳತನ ಪ್ರಕರಣದ ಜಾಲವನ್ನು ಬೇಧಿಸುವಲ್ಲಿ ಪೂರ್ವ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ನೇಪಾಳ ಮತ್ತು ಬಿಹಾರ ಸೆಕ್ಯುರಿಟಿ ಗ್ಯಾಂಗ್ನಿಂದ ಕಳ್ಳತನ ನಡೆದಿರುವ ಮಾಹಿತಿ ಮೇರೆಗೆ ನೇಪಾಳಕ್ಕೆ ತೆರಳಿದ್ದ ವಿಶೇಷ ತಂಡ, ಸದ್ಯ ನಾಲ್ವರು ಚಿನ್ನದ ಚೋರರನ್ನ ಹಿಡಿದು ಅವರಿಂದ ಸುಮಾರು 8.6 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಹೇಗಿತ್ತು ಇವರ ಪ್ಲಾನ್:
ಬಿಹಾರದ ಥೆಪ್ಟ್ ಗ್ಯಾಂಗ್ ಲೀಡರ್ ಒಬ್ಬ ಪುಲಕೇಶಿನಗರ ಠಾಣಾ ವ್ಯಾಪ್ತಿಯ ಮುತ್ತೂಟ್ ಜ್ಯುವೆಲರ್ಸ್ಗೆ ಕನ್ನ ಹಾಕಬೇಕು ಎಂದು ಪ್ಲಾನ್ ಮಾಡಿದ್ದಾನೆ. ಇದಕ್ಕೆ ನೇಪಾಳದ ಸೆಕ್ಯೂರಿಟಿ ಗಾರ್ಡ್ಗಳ ಸಹಾಯ ಪಡೆದು, ಒಟ್ಟು ಹನ್ನೆರಡು ಮಂದಿ ಸೇರಿಕೊಂಡು ಕಳ್ಳತನ ಮಾಡಿದ್ದಾರೆ.
ಕಳ್ಳತನ ಮಾಡಿದ ನಂತರ ಎರಡು ತಂಡಗಳಾಗಿ ವಿಭಾಗವಾದ ಇವರು, ಚಿನ್ನವನ್ನ ಹಂಚಿಕೊಂಡು ಒಂದು ತಂಡ ನೇಪಾಳ ಮತ್ತೊಂದು ತಂಡ ದೆಹಲಿಗೆ ತೆರಳಿದೆ. ಸದ್ಯ ನೇಪಾಳದಲ್ಲಿರುವ ನಾಲ್ವರನ್ನ ವಶಕ್ಕೆ ಪಡೆದು, ಗ್ಯಾಂಗ್ ಲೀಡರ್ ಹಾಗೂ ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ.
ಕಳೆದ ಡಿಸೆಂಬರ್ 22 ರಂದು ಮುತ್ತೂಟ್ ಫೈನಾನ್ಸ್ನಲ್ಲಿ 77 ಕೆಜಿ ಚಿನ್ನ ಕಳ್ಳತನವಾಗಿತ್ತು. ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಡಿಸಿಪಿ ಹಾಗೂ ಸಿಸಿಬಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿದ್ದರು.