ಬೆಂಗಳೂರು: ಲೂಟಿ ಮಾಡಿ ಗಂಟು-ಮೂಟೆ ಕಟ್ಟುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಲೂಟಿಕೋರರು ಸಿಕ್ಕಿಬಿದ್ದಿದ್ದಾರೆ. ಬೆಂಗಳೂರಿನ ಬಾಣಸವಾಡಿಯಲ್ಲಿನ ಸುಬ್ಬಯ್ಯಪಾಳ್ಯದ ಮುತ್ತೂಟ್ ಫೈನಾನ್ಸ್ ನಲ್ಲಿ ಈ ಘಟನೆ ಜರುಗಿದೆ. ಪೊಲೀಸರು ಇವರಿಂದ 4 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ಆಗಸ್ಟ್ 21ರ ರಾತ್ರಿ ನೇಪಾಳಿ ಗ್ಯಾಂಗ್ ನಿಂದ ಕಳ್ಳತನಕ್ಕೆ ಯತ್ನ ನಡೆದಿತ್ತು. ಕಳ್ಳರು ಶೆಟರ್ ಒಡೆದು ಶಾಪ್ ಒಳಗೆ ಎಂಟ್ರಿ ಕೊಟ್ಟಿದ್ದರು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಲೂಟಿಕೋರರು 4 ಕೋಟಿ ಮೌಲ್ಯದ ಚಿನ್ನಾಭರಣ ಅಬೇಸ್ ಮಾಡಿದ್ದರು. ನಂತರ ಲೂಟಿ ಮಾಡಿದ ಚಿನ್ನವನ್ನು ಮೂಟೆ ಕಟ್ಟುತ್ತಿದ್ದ ವೇಳೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಆಗ ರೆಡ್ ಹ್ಯಾಂಡ್ ಆಗಿ ಇಬ್ಬರೂ ಆರೋಪಿಗಳು ಸಿಕ್ಕಿಬಿದ್ದಿದ್ದಾನೆ.
ಕಳ್ಳತನಕ್ಕಿಳಿದ ಸೆಕ್ಯೂರಿಟಿ ಗಾರ್ಡ್ಸ್:
ನೇಪಾಳ ಮೂಲದ ರೋಹನ್, ಅಗರಿ ಬಂಧಿತ ಖದೀಮರು. ಆರೋಪಿಗಳು ಐದಾರು ವರ್ಷಗಳ ಹಿಂದೆ ಬೆಂಗಳೂರಿನ ಬಂದಿದ್ದರು. ಹೊರಮಾವಿನಲ್ಲಿ ಇಬ್ಬರು ಬೇರೆ ಅಪಾರ್ಟ್ಮೆಂಟ್ಗಳಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿ ಕೆಲಸ ಮಾಡುತ್ತಿದ್ದರು. ಬಡತನದ ಜೊತೆಗೆ ವಿಪರೀತ ಸಾಲ ಮಾಡಿಕೊಂಡಿದ್ದ ಆರೋಪಿಗಳು ಸಂಬಂಧಿಕರಾಗಿದ್ದರು. ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಿ ದಿಢೀರ್ ಶ್ರೀಮಂತರಾಗಬೇಕೆಂದು ತೀರ್ಮಾನಿಸಿದ್ದರು.
ಇದರಂತೆ ಸುಬ್ಬಯನಪಾಳ್ಯದಲ್ಲಿರುವ ಮುತ್ತೂಟ್ ಫೈನಾನ್ಸ್ನಲ್ಲಿ ಚಿನ್ನಾಭರಣ ಕದಿಯಲು ಸಂಚು ರೂಪಿಸಿದ್ದರು. ಇದರಂತೆ ಆರೋಪಿಗಳು ಎರಡು-ಮೂರು ಬಾರಿ ಶಾಪ್ಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಪಕ್ಕಾ ಪ್ಲಾನ್ ಮಾಡಿಕೊಂಡು ಆ.21ರಂದು ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ ಮುತ್ತೂಟ್ ಫೈನಾನ್ಸ್ ಶಾಪ್ ಬಳಿ ಬಂದಿದ್ದಾರೆ. ಜೊಮೆಟೊ ಹಾಗೂ ಸ್ವಿಗ್ಗಿ ಕಂಪನಿಯ ಟೀ ಶರ್ಟ್ ಧರಿಸಿ ಬಂದಿದ್ದ ಆರೋಪಿಗಳು ಆಯುಧಗಳಿಂದ ಶಾಪ್ ಬೀಗ ಒಡೆದು ಶೆಟರ್ ತೆರೆದು ಒಳನುಗ್ಗಿದ್ದಾರೆ.
ತಮ್ಮ ಚಹರೆ ಗೊತ್ತಾಗದಂತೆ ಸಾಕ್ಷ್ಯಾಧಾರ ನಾಶ ಮಾಡಲು ಶಾಪ್ ನೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಸಂಪರ್ಕ ಸ್ಥಗಿತಗೊಳಿಸಿ ಡಿವಿಆರ್ಗಳನ್ನು ಒಡೆದು ಹಾಕಿದ್ದಾರೆ. ಚಿನ್ನವಿರುವ ಡ್ರಾವರ್ಗೆ ಕೈ ಹಾಕಿದಾಗ ಅಲಾರಾಂ ಶಬ್ದ ಬಂದಿದೆ. ಕೂಡಲೇ ಶಾಪ್ ಮ್ಯಾನೇಜರ್ಗೆ ಅಲರ್ಟ್ ಮೆಸೇಜ್ ತಲುಪಿದೆ. ಇದರಿಂದ ಎಚ್ಚೆತ್ತುಕೊಂಡ ಮ್ಯಾನೇಜರ್, ಕೂಡಲೇ ಬಾಣಸವಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ದೌಡಾಯಿಸಿ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಾತ್ ರೂಂನಲ್ಲಿ ಅಡಗಿದ್ದ ಆರೋಪಿಗಳು:
ಎಲ್ಲಾ ರೀತಿಯ ಪ್ಲಾನ್ ಮಾಡಿಕೊಂಡಿದ್ದ ಖದೀಮರು ಚಿನ್ನವಿದ್ದ ಲಾಕರ್ ಮುಟ್ಟುತ್ತಿದ್ದಂತೆ ಅಲಾರಾಂ ಶಬ್ದ ಬಂದಿದ್ದರಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಶಬ್ದ ನಿಲ್ಲಿಸಲು ಎಲ್ಲ ಕಸರತ್ತು ಮಾಡಿದರೂ ಪ್ರಯೋಜನವಾಗಿರಲಿಲ್ಲ. ಶಾಪ್ ಸಿಬ್ಬಂದಿ ನೀಡಿದ ಮಾಹಿತಿಯಂತೆ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದರು. ಆಗ ಸಿಕ್ಕಿಬೀಳುವ ಭೀತಿಯಿಂದ ಆರೋಪಿಗಳು ಬಾತ್ ರೂಂನಲ್ಲಿ ಬಚ್ಚಿಟ್ಟುಕೊಂಡಿದ್ದರು.
ಖದೀಮರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸಾಲಬಾಧೆಯಿಂದ ಹೊರಬರಲು ಹಾಗೂ ಬೇಗ ಶ್ರೀಮಂತರಾಗಲು ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.