ಬೆಂಗಳೂರು: ಕ್ಯಾಬ್ ಚಾಲಕನನ್ನು ಅಡ್ಡಗಟ್ಟಿ ಚಾಕು ತೋರಿಸಿ 15 ಸಾವಿರ ರೂಪಾಯಿ ಸುಲಿಗೆ ಮಾಡಿದ್ದ ಸುಲಿಗೆಕೋರನನ್ನು ಬೇಗೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೊಂಗಸಂದ್ರ ನಿವಾಸಿ ಆದಿತ್ಯ ಬಂಧಿತ ಆರೋಪಿ. ಆರ್.ಟಿ ನಗರ ನಿವಾಸಿ ಜಗದೀಶ್ ಮಾ.20ರಂದು ರಾತ್ರಿ 9 ಗಂಟೆಗೆ ಏರ್ಪೋರ್ಟ್ನಿಂದ ಗ್ರಾಹಕರೊಬ್ಬರನ್ನು ಕರೆದುಕೊಂಡು ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಇದಾದ ಬಳಿಕ ಮತ್ತೋರ್ವ ಗ್ರಾಹಕರನ್ನು ಕರೆತರಲು ಬೇಗೂರಿನ ರಾಯಲ್ ಶೆಲ್ಟರ್ಸ್ ಲೇಔಟ್‌ನಲ್ಲಿ ತೆರಳುತ್ತಿದ್ದಾಗ ಸ್ಕೂಟರ್‌ನಲ್ಲಿ ಬಂದ ಆರೋಪಿ ಆದಿತ್ಯ ಕಾರನ್ನು ಅಡ್ಡಗಟ್ಟಿದ್ದ.
ನನ್ನ ಸ್ಕೂಟರ್‌ಗೆ ಕಾರು ಗುದ್ದಿ ಹಾನಿ ಮಾಡಿರುವುದಾಗಿ ಸುಳ್ಳು ನೆಪವೊಡ್ಡಿ ಜಗದೀಶ್ ಜತೆ ಜಗಳ ಮಾಡಿದ್ದ. ಇದಾದ ಬಳಿಕ ಮಾರಕಾಸ್ತ್ರ ತೋರಿಸಿ ಹಣ ಕೊಡುವಂತೆ ಬೆದರಿಸಿದ್ದಾನೆ. ಈ ವೇಳೆ ಜಗದೀಶ್ ಜೇಬಿನಲ್ಲಿದ್ದ 15 ಸಾವಿರ ರೂ. ಹಾಗೂ ಮೊಬೈಲ್ ಕಸಿದುಕೊಂಡು ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಜಗದೀಶ್ ಬೇಗೂರು ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ.