ಬೆಂಗಳೂರು: ಪೇ ಸಿಎಂ ಪೋಸ್ಟರ್ ಅಭಿಯಾನದ ಹಿನ್ನೆಲೆಯಲ್ಲಿ ನಗರದ ಪೊಲೀಸರು ಐವರು ಕಾಂಗ್ರೆಸ್ ಮುಖಂಡರನ್ನು ವಶಕ್ಕೆ ಪಡೆದಿದ್ದು, ಹೈಗ್ರೌಂಡ್ಸ್ ಠಾಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ವಿಚಾರಿಸಿದ್ದಾರೆ.
ಡಿಕೆಶಿ ಕಿಡಿ: ಪಕ್ಷದ ಮುಖಂಡರ ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡುತ್ತಿದ್ದೇವೆ. 40% ಕಮಿಷನ್ ಸರ್ಕಾರ ಅಂತ ನಾವೆಲ್ಲ ಕ್ಯಾಂಪೇನ್ ಮಾಡಿದ್ದೇವೆ. ಬಿಜೆಪಿ ವಿರುದ್ಧ ಮಾಧ್ಯಮದ ಸೋರ್ಸ್ ರೇಟ್ ಕಾರ್ಡ್ ಬಳಸಿ ಕ್ಯಾಂಪೇನ್ ಮಾಡಲಾಗಿದೆ. ಇದು ಸತ್ಯ, 1.9 ಲಕ್ಷ ಜನ ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. 8 ಸಾವಿರ ದೂರು ದಾಖಲಾಗಿದೆ. ನಾಳೆ ಎಲ್ಲ ಎಂಎಲ್ಸಿ, ಎಂಎಲ್ಎಗಳು ನಾವೇ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ ಎಂದಿದ್ದಾರೆ. ಸರ್ಕಾರಿ ಕಟ್ಟಡಗಳ ಮೇಲೆಯೂ ಪೋಸ್ಟರ್ ಅಂಟಿಸುತ್ತೇವೆ. ಬಿಜೆಪಿಯವರು ಅಧಿಕಾರ ದುರ್ಬಳಕೆ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಇದು ರಾಜಕಾರಣದ ವ್ಯವಸ್ಥೆ. ನನ್ನ ಹಾಗೂ ಸಿದ್ದರಾಮಯ್ಯ ಫೋಟೋವನ್ನೂ ಕೂಡ ಅವರು ಪೋಸ್ಟರ್ ಮಾಡಿದ್ದಾರೆ. ಅಧಿಕಾರದಲ್ಲಿ ಇರುವವರು ಇದನ್ನು ಜೀರ್ಣಿಸಿಕೊಳ್ಳಬೇಕು. ರಾತ್ರೋರಾತ್ರಿ ಕಾಂಗ್ರೆಸ್ ಮುಖಂಡರನ್ನು ಬಂಧನ ಮಾಡಿರುವುದನ್ನು ಖಂಡಿಸುತ್ತೇನೆ. ಬಿಬಿಎಂಪಿಯವರಿಗೆ ಕಣ್ಣಿಲ್ಲವೇ? ಜನೋತ್ಸವದ್ದು ಅಷ್ಟೊಂದು ಪೋಸ್ಟರ್ ಹಾಕಿಲ್ವಾ? ರೆಡ್ಡಿ, ಮುನಿರತ್ನ, ಸುಧಾಕರ ಎಲ್ಲರೂ ಪೋಸ್ಟರ್ ಹಾಕಿದ್ದಾರೆ. ಅವುಗಳಿಗೆ ಬಿಬಿಎಂಪಿ ಯಾಕೆ ಪ್ರಕರಣ ದಾಖಲಿಸಿಲ್ಲ, ಸಿಎಂ ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪದಾಧಿಕಾರಿಗಳ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜಮಾಯಿಸಿದ್ದರು.
ಇದನ್ನೂ ಓದಿ: PAYCM ಪೋಸ್ಟರ್ ಪ್ರಕರಣ: ಐವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ