ಬೆಂಗಳೂರು: ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬನನ್ನು ಅಪಹರಿಸಿ 5 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಭಾತ್ಮೀದಾರನ ಸಹಿತ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಖಾಸಿಂ ಮುಜಾಹಿದ್, ಮುಕ್ತಿಯಾರ್, ವಸಿಂ, ಶಬ್ಬೀರ್ ಹಾಗೂ ಶೋಯೆಬ್ ಬಂಧಿತ ಆರೋಪಿಗಳು.
ಪೊಲೀಸ್ ಭಾತ್ಮೀದಾರನಿಂದಲೇ ಅಪಹರಣದ ಸಂಚು: ಸಿಸಿಬಿ ಪೊಲೀಸರ ಭಾತ್ಮೀದಾರನಾಗಿದ್ದ ಮೊಹಮ್ಮದ್ ಖಾಸಿಂ ಮುಜಾಹಿದ್, ಸಿಸಿಬಿ ಕಚೇರಿಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಸೆಪ್ಟೆಂಬರ್ 2 ರಂದು ಕಾಲು ಸಿಂಗ್ ಎಂಬಾತ ತನ್ನ ಕಾರಿನಲ್ಲಿ ಬರುತ್ತಿದ್ದಾಗ ವಿ.ವಿ. ಪುರಂ ಬಳಿ ಆರೋಪಿ ಮತ್ತವನ ಟೀಂ ಆತನನ್ನು ಅಡ್ಡಗಟ್ಟಿ ಸುತ್ತುವರೆದಿತ್ತು.
ನಂತರ 'ನಾವು ಸಿಸಿಬಿ ಪೊಲೀಸರು' ಎನ್ನುತ್ತ ಕಾಲು ಸಿಂಗ್ನನ್ನು ಕಾರಿನ ಹಿಂಬದಿ ಸೀಟ್ನಲ್ಲಿ ಕೂರಿಸಿ, ನೀನು ಗಾಂಜಾ ಸರಬರಾಜುದಾರ ಎಂಬ ಮಾಹಿತಿಯಿದೆ ಎಂದು ಆತನ ಕಣ್ಣಿಗೆ ಬಟ್ಟೆ ಕಟ್ಟಿ ವಿಲ್ಸನ್ ಗಾರ್ಡನ್ನ ಮನೆಯೊಂದಕ್ಕೆ ಕರೆದೊಯ್ದಿದ್ದರು. ಮನೆಯಲ್ಲಿ ಕಾಲು ಸಿಂಗ್ಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ, ಆತನ ಮೊಬೈಲ್ನಿಂದ ಆತನ ಸ್ನೇಹಿತನಿಗೆ ಫೋನ್ ಮಾಡಿ 'ನಾವು ಸಿಸಿಬಿ ಪೊಲೀಸರು' ಎಂದು ಐದು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು.
ಈ ವೇಳೆ ಕಾಲು ಸಿಂಗ್ ಸ್ನೇಹಿತರು ಪರಿಚಿತ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ತಕ್ಷಣ ಸಿಸಿಬಿ ಪೊಲೀಸರಿಗೆ ವಿಷಯ ರವಾನೆಯಾಗಿದೆ ಎಂಬುದನ್ನು ಅರಿತ ಆರೋಪಿಗಳು ಕಾಲು ಸಿಂಗ್ನ ಬಿಟ್ಟು ಕಳುಹಿಸಿದ್ದರು. ಇದಾದ ನಂತರ ಕಾಲು ಸಿಂಗ್ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದಾಗ ಆರೋಪಿಗಳ ಮುಖವಾಡ ಬಯಲಾಗಿದೆ. ಸದ್ಯ ಆರೋಪಿಗಳಾದ ಮೊಹಮ್ಮದ್ ಖಾಸಿಂ ಮುಜಾಹಿದ್, ಮುಕ್ತಿಯಾರ್, ವಸಿಂ, ಶಬ್ಬೀರ್ ಹಾಗೂ ಶೋಯೆಬ್ ಬಂಧಿತ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಘಟನೆ ಸಂಬಂಧ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಿಎಂಒ ಸೋಗಿನಲ್ಲಿ ವಂಚನೆ ಪ್ರಕರಣ: ಮಾಯಾಂಕ್ ತಿವಾರಿ ಆವರಣದಲ್ಲಿ ಸಿಬಿಐ ಶೋಧ
ಇನ್ನು ಇದೇ ತರ ಮೊನ್ನೆ ನವದೆಹಲಿಯ ನಗರವೊಂದರಲ್ಲಿ ಇಡಿ ಅಧಿಕಾರಿಯೊಬ್ಬರ ಸೋಗಿನಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಘಟನೆ ನಡೆದಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿ ಸೋಗಿನಲ್ಲಿ ಬಾಬಾ ಹರಿದಾಸ್ ನಗರದಲ್ಲಿರುವ ಮನೆಗೆ ದುಷ್ಕರ್ಮಿಗಳು ಎರಡು ಕಾರುಗಳಲ್ಲಿ ಬಂದೂಕು ಜೊತೆ ಆಗಮಿಸಿದ್ದರು. ದುಷ್ಕರ್ಮಿಗಳು ನಟಿಸಿ 3.20 ಕೋಟಿ ರೂಪಾಯಿ ದೋಚಿ ಪರಾರಿಯಾಗಿದ್ದರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೆಲ ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದಾರೆ.