ಬೆಂಗಳೂರು : ಭಾರತ ಸರ್ಕಾರ 2000ನೇ ಸಾಲಿನಲ್ಲಿ ನಿಷೇಧಿಸಿದ್ದ ಛಾಪಾ ಕಾಗದವನ್ನು ನಕಲಿಯಾಗಿ ಮುದ್ರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಿ, ಸರ್ಕಾರಕ್ಕೆ ವಂಚಿಸುತ್ತಿದ್ದ ಕುಖ್ಯಾತ ಆರೋಪಿಗಳನ್ನು ಬಂಧಿಸುವಲ್ಲಿ ಎಸ್.ಜೆ.ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಸೈನ್ ಮೋದಿ, ಹರೀಶ್, ಶವರ್ ಅಲಿಯಾಸ್ ಸಿಮಾ, ನಜ್ಮಾ ಫಾತಿಮಾ ಎಂಬುವವರನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಮುಂದುವರೆದಿದೆ.
ಈ ಆರೋಪಿಗಳು ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಪಿ.ರಸ್ತೆಯಲ್ಲಿರುವ ಅಮರ್ ರೆಡಿಯೋ ಅಂಗಡಿ ಬಳಿ ನಿಷೇಧ ಮಾಡಿರುವ ಛಾಪಾ ಕಾಗದವನ್ನು ನಕಲಿಯಾಗಿ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಿದ್ದಾರೆ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ನಿಷೇಧ ಮಾಡಿದ್ದ 2,71,81,000 ಮುಖಬೆಲೆಯ ವಿವಿಧ ನಕಲಿ ಛಾಪಾ ಕಾಗದಗಳನ್ನು ವಶಕ್ಕೆ ಪಡೆಯಲಾಗಿದೆ.
ಇವರಲ್ಲಿ ಪ್ರಮುಖ ಆರೋಪಿ ಹಸೈನ್ ಮೋದಿ ಬಾಬು ನಕಲಿ ಛಾಪಾ ಕಾಗದವನ್ನು ಖರೀದಿ ಮಾಡಿ ಮಾರಾಟ ಮಾಡುತ್ತಿದ್ದ. ಈತನಿಗೆ ಛೋಟಾ ತೆಲಗಿ ಎಂದು ಹೆಸರಿದ್ದು, ಈತ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾನೆ. ಅಷ್ಟೇ ಅಲ್ಲದೆ ಈತ ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಕಂದಾಯ ಭವನದ ಬಳಿ ಹಾಗೂ ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಬಾಡಿಗೆಗೆ ಕರಾರು ಪತ್ರ ಹಾಗೂ ಭೋಗ್ಯದ ಕರಾರು ಪತ್ರ ಮಾಡಿಸಿಕೊಡುವ ಬ್ರೋಕರ್ ಕೆಲಸ ಮಾಡುತ್ತಿದ್ದ.
ನಂತ್ರ ಕಳೆದ ಕೆಲ ವರ್ಷಗಳಿಂದ ನಕಲಿ ಛಾಪಾ ಕಾಗದ ತಯಾರಿಸುವ ಕೆಲಸ ಮಾಡ್ತಿದ್ದ. ಹಾಗೆ ಈತ ಸುಮಾರು ವರ್ಷಗಳಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಈತನ ಮೇಲೆ 2013ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 258, 260, 465, 468,471, 420 ,380, 419ರ ಅಡಿ ಪ್ರಕರಣ ದಾಖಲಾಗಿದೆ.
ಎ2 ಆರೋಪಿ ಹರೀಶ: ಈತ ಬಿ.ಎ. ಪದವೀಧರ. ಸಿಟಿ ಸಿವಿಲ್ ನ್ಯಾಯಾಲಯ ಬಳಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದು, ಇದೇ ಕೃತ್ಯಗಳಲ್ಲಿ ಇಬ್ಬರೂ ಒಟ್ಟಿಗೆ ಸೇರಿದ್ದರು.
ಎ4 ಶವರ್ ಸೀಮಾ: ಈಕೆ ಬಿಕಾಂ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ ಸುಮಾರು 16 ವರ್ಷಗಳಿಂದ ಕಂದಾಯ ಭವನದ ಬಳಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದಳು. ಬಾಪೂಜಿ ನಗರದಲ್ಲಿ ವಾಸ ಮಾಡುತ್ತಾ ನಕಲಿ ಛಾಪಾ ಹಗರಣದಲ್ಲಿ ಭಾಗಿಯಾಗ್ತಿದ್ದಳು.
ಆರೋಪಿ ಸಂಖ್ಯೆ 5 ನಜ್ಮಾ ಫಾತಿಮಾ: ಈಕೆಯು ಸುಮಾರು 13 ವರ್ಷಗಳ ಹಿಂದಿನಿಂದ ಕಂದಾಯ ಭವನದ ಬಳಿ ಬಾಡಿಗೆ ಕರಾರು, ಭೋಗ್ಯದ ಕರಾರು ಮತ್ತು ಇತರೆ ದಾಖಲಾತಿಗಳಿಗೆ ನೋಟರಿ ಮಾಡಿಸಿಕೊಡುವ ಬ್ರೋಕರ್ ಕೆಲಸ ಮಾಡಿಕೊಂಡಿದ್ದಳು.
ಈ ಎಲ್ಲಾ ಆರೋಪಿಗಳು ನ್ಯಾಯಾಲಯದಲ್ಲಿ ತಕರಾರು ಸುಳ್ಳು ದಾವೆ ಹೂಡಲು, ಸುಳ್ಳು ವಿಲ್ ಮಾಡಲು, ಸುಳ್ಳು ಕರಾರು ಪತ್ರಗಳನ್ನು ಮಾಡುತ್ತಾ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದುದು ವಿಚಾರಣೆ ವೇಳೆ ಗೊತ್ತಾಗಿದೆ.