ಬೆಂಗಳೂರು: ಯುವತಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದು, ಆಕೆ ಗರ್ಭಿಣಿ ಆದ ಬಳಿಕ ಕೈ ಕೊಟ್ಟು ಪರಾರಿಯಾಗಿದ್ದ ಯುವಕನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆಯ ನಿವಾಸಿ ಅರುಣ್ (28) ಬಂಧಿತ ಆರೋಪಿ. ಇನ್ನು ಬಾಗಲಗುಂಟೆ ನಿವಾಸಿಯಾದ 25 ವರ್ಷದ ಈ ಯುವತಿ ಈವೆಂಟ್ ಮ್ಯಾನೇಜ್‌ಮೆಂಟ್ ಕೆಲಸ ಮಾಡಿಕೊಂಡಿದ್ದಳು. ಕಳೆದ 10 ತಿಂಗಳ ಹಿಂದೆ ಅಲ್ಲೇ ಕೆಲಸ ಮಾಡುತ್ತಿದ್ದ ಸ್ನೇಹಿತೆಯ ಸಹೋದರ ಆರೋಪಿ ಅರುಣ್ ಪರಿಚಯವಾಗಿತ್ತು. ಅರುಣ್ 5 ತಿಂಗಳ ಹಿಂದೆ ಈಕೆಗೆ ಪ್ರೇಮನಿವೇದನೆ ಮಾಡಿದ್ದ. ನಂತರ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿ ಜತೆಯಾಗಿ ಜೀವಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹವಾಗುವುದಾಗಿ ಯುವತಿಯನ್ನು ನಂಬಿಸಿ ಆಕೆಯಿಂದ ಹಂತ ಹಂತವಾಗಿ 4 ಲಕ್ಷ ರೂ. ಪಡೆದುಕೊಂಡಿದ್ದ. ಈ ನಡುವೆ ಯುವತಿ ಗರ್ಭಿಣಿಯಾಗಿದ್ದಳು. ಈ ವಿಚಾರ ಅರುಣ್‌ಗೆ ಗೊತ್ತಾಗುತ್ತಿದ್ದಂತೆ, ನಿನ್ನ ಜತೆ ನನಗೆ ಸಂಬಂಧವಿಲ್ಲ. ಮಗುವನ್ನು ತೆಗೆಸಿಬಿಡು, ನಾನು ನಿನ್ನನ್ನು ಪ್ರೀತಿಸುತ್ತಿಲ್ಲ. ಮದುವೆಯೂ ಆಗುವುದಿಲ್ಲ. ನೀನು ಏನು ಮಾಡುತ್ತೀಯೋ ಮಾಡಿಕೋ ಎಂದು ಹೇಳಿ ಪರಾರಿಯಾಗಿದ್ದಾನೆ. ನಡೆದ ಸಂಗತಿಯನ್ನು ಸಂತ್ರಸ್ತೆ ಅರುಣ್ ಮನೆಯವರಿಗೂ ತಿಳಿಸಿದ್ದಳು. ಆದರೆ, ಆತನ ಮನೆಯವರೇ ತನ್ನನ್ನು ಓಲೈಕೆ ಮಾಡಿ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇದಾದ ನಂತರ ಕೆಲ ದಿನ ಆರೈಕೆ ಮಾಡಿ ಕಳುಹಿಸಿದ್ದಾರಂತೆ. ಘಟನೆ ಸಂಬಂಧ ಸಂತ್ರಸ್ತೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಅರುಣ್ ವಿರುದ್ಧ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರುಣ್‌ನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ