ಬೆಂಗಳೂರು: ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಹಾವಳಿ ನಗರ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು, ಜನರ ಮೇಲೆ ದನ-ನಾಯಿಗಳು ದಾಳಿ ಮಾಡುವುದು ಕಾಮನ್ ಆಗಿಬಿಟ್ಟಿದೆ. ಇವುಗಳ ನಿಯಂತ್ರಣಕ್ಕೆ ಪ್ರತಿ ವರ್ಷ ಕೋಟ್ಯಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೂ ಈ ಸಮಸ್ಯೆ ಕಮ್ಮಿಯಾಗಿಲ್ಲ. ಬೀದಿನಾಯಿ ಕಚ್ಚಾಟ, ಬಿಡಾಡಿ ದನಗಳ ಗುದ್ದಾಟದಿಂದ ಜನರು ಹೈರಾಣಾಗಿ ಹೋಗುತ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಸಮಸ್ಯೆ ಇಂದು ನಿನ್ನೆಯದಲ್ಲ. ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗ್ತಿರೋದು ಸಮೀಕ್ಷೆಯಿಂದ ಹೊರಬಿದ್ದಿದೆ. ಇನ್ನು ದಾವಣಗೆರೆ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಸಂತಾನ ಹರಣ ಚಿಕಿತ್ಸೆ ಮಾಡುವ ಮೂಲಕ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲಾಗ್ತಿದೆ. ನಾಯಿ ಕಡಿತಕ್ಕೊಳಗಾದವರಿಗೆ ಏನೂ ಆಗದಂತೆ ನಾಯಿಗಳಿಗೆ ವ್ಯಾಕ್ಸಿನ್ ಕೂಡ ನೀಡಲಾಗುತ್ತಿದೆ. ನಗರದಲ್ಲಿ ಸುಮಾರು 15 ಸಾವಿರ ನಾಯಿಗಳಿದ್ದು, ಅದರಲ್ಲಿ ಕೆಲ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ.
ಇನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ, ಮಹಾನಗರ ಮದ್ದು ರೆಡಿ ಮಾಡಿದೆ. ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು, ಇಟ್ಟಿಗಟ್ಟಿಯಲ್ಲಿ ಆಪರೇಷನ್ ಥಿಯೇಟರ್ ಹಾಗೂ ಗಾರ್ಡನ್ ನಿರ್ಮಾಣ ಮಾಡಲಾಗಿದೆ. ನಾಯಿಗಳ ಸಂತಾನಹರಣ ಮಾಡಿ ಮತ್ತೆ ನಗರದಲ್ಲಿ ತಂದು ಬಿಡಲಾಗುತ್ತದೆ. ಬಳ್ಳಾರಿಯಲ್ಲಿ ಬರೋಬ್ಬರಿ 18 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಇವುಗಳ ಹಾವಳಿ ತಡೆಯಲು ಮಹಾನಗರ ಪಾಲಿಕೆ ಒಂದು ನಾಯಿಗೆ 980 ರೂ. ಖರ್ಚು ಮಾಡುತ್ತಿದೆ.
ಬಳ್ಳಾರಿಯಲ್ಲಿ ಬೀದಿ ನಾಯಿಗಳ ಹಿಂಡು ಎಲ್ಲೆಡೆ ಬೀಡು ಬಿಟ್ಟಿವೆ. ಬರೋಬ್ಬರಿ 20 ಸಾವಿರದ ಗಡಿ ದಾಟಿದೆ ಎಂದು ಅಂದಾಜಿಸಲಾಗಿದ್ದು, ಈವರೆಗೂ ಬೀದಿ ನಾಯಿಗಳ ಸಮೀಕ್ಷೆಯ ಕಾರ್ಯ ನಡೆದಿಲ್ಲ. ಇನ್ನು 13 ವರ್ಷ ಕಳೆದರೂ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆದಿಲ್ಲ. 2007 ನೇ ಇಸವಿಯಲ್ಲಿ ಈ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದು ಬಿಟ್ಟರೆ, ಈವರೆಗೂ ಬಳ್ಳಾರಿ ಮಹಾನಗರದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಯೇ ನಡೆದಿಲ್ಲ ಎಂಬುದು ಮಾತ್ರ ದಿಟ.
ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡುವುದರಿಂದ ಬೀದಿ ನಾಯಿಗಳ ಸಂತತಿ ಯಥಾಸ್ಥಿತಿಗೆ ಬರಲಿದೆ. ಬಿಡಾಡಿ ದನಗಳನ್ನು ಗೋಶಾಲೆಗೆ ಹಾಕಿದರೆ ಅವುಗಳಿಗೆ ಕಡಿವಾಣ ಬೀಳಲಿದೆ. ಸರ್ಕಾರ ಕೂಡಲೇ ಈ ಕುರಿತು ಕ್ರಮ ವಹಿಸಬೇಕಿದೆ.