ಬೆಂಗಳೂರು: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಪಕ್ಷದ ಕಚೇರಿಗೆ ದಿಢೀರ್ ಆಗಮಿಸಿದ ಕೆಲವೇ ಕ್ಷಣದಲ್ಲಿ ಅರುಣ್ ಸಿಂಗ್ ಕೆಕೆ ಅತಿಥಿ ಗೃಹಕ್ಕೆ ನಿರ್ಗಮಿಸಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಮನೆ ಮಾಡಿದೆ.
ಇಂದು ಸಚಿವ ಅರವಿಂದ ಲಿಂಬಾವಳಿ ಜತೆಗೆ ಬಂದ ಅರವಿಂದ್ ಬೆಲ್ಲದ್ ಜಗನ್ನಾಥ ಭವನಕ್ಕೆ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕಚೇರಿಯಿಂದ ನಿರ್ಗಮಿಸಿದ್ದಾರೆ. ಈವರೆಗೆ ಉಭಯ ನಾಯಕರ ಭೇಟಿ ಬಗ್ಗೆ ಸ್ಪಷ್ಟನೆ ಇಲ್ಲ ಹಾಗೂ ಮೂಲಗಳ ಪ್ರಕಾರ ಭೇಟಿ ಆಗಿಲ್ಲ ಎಂದು ಹೇಳಲಾಗುತ್ತಿದೆ.
ಗುರುವಾರ ಶಾಸಕರ ಭೇಟಿಗೆ ಅವಕಾಶ ನೀಡಿದ್ದರೂ ಕೂಡ ಬೆಲ್ಲದ್ ಆಗಮಿಸಿರಲಿಲ್ಲ. ಜತೆಗೆ ಫೋನ್ ಟ್ಯಾಪಿಂಗ್ ಆರೋಪವನ್ನು ಮಾಡಿದ್ದರು. ಅಲ್ಲದೇ ಕೆಲವರು ನನ್ನನ್ನು ಫಾಲೋ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿಗೆ ಅಧಿಕೃತ ದೂರು ನೀಡಿದ್ದರು. ಅರವಿಂದ್ ಬೆಲ್ಲದ್ ಮಾಡಿರುವ ಆರೋಪ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ ಇಂದು ಅರವಿಂದ್ ಬೆಲ್ಲದ್ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ದಿಢೀರ್ ಆಗಿ ಆಗಮಿಸಿದ್ದು, ಕುತೂಹಲಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಅರುಣ್ ಸಿಂಗ್ ಭೇಟಿಗೆ ಆಗಮಿಸದ ಶಾಸಕ ಅರವಿಂದ್ ಬೆಲ್ಲದ್: ಮುಂದಿನ ಭೇಟಿ ಅವಕಾಶ ದಿಲ್ಲಿಯಲ್ಲೇ!
ದೆಹಲಿಗೂ ತೆರಳಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದು ಬಿಎಸ್ ಯಡಿಯೂರಪ್ಪ ಆಪ್ತರ ಬಣಕ್ಕೆ ಅಸಮಾಧಾನಕ್ಕೂ ಕಾರಣವಾಗಿತ್ತು.