ಬೆಂಗಳೂರು: ಬಿಜೆಪಿ ಹಾಗೂ ಮೋದಿ ಪರ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದ ಪತ್ರಕರ್ತ ಮಹೇಶ್ ಹೆಗಡೆ ಅವರ ಬಂಧನವನ್ನು ಬಿಜೆಪಿ ಖಂಡಿಸುತ್ತದೆ. ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಈ ರೀತಿ ಸೇಡಿನ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಂಜೆ ಮೋದಿ ಬೆಂಬಲಿಗರಾದ ಥರ್ಡ್ ಪಾರ್ಟ್ ಕ್ಯಾಂಪೇನ್ ಮಾಡುವ ಪೋಸ್ಟ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಬರೆಯುವ ಮಹೇಶ್ ಹೆಗಡೆ ಅವರನ್ನು ಸಿಐಡಿ ಬಂಧಿಸಿದೆ. ಸೋನಿಯಾ ಗಾಂಧಿಗೆ ಬರೆದ ಪತ್ರ ನಕಲಿ ಎನ್ನುವ ವಿಚಾರ ಮುಂದಿಟ್ಟುಕೊಂಡು ಗೃಹ ಸಚಿವ ಎಂ.ಬಿ.ಪಾಟೀಲ್ ತನಿಖೆ ಪ್ರಾರಂಭಿಸಿದ್ದಾರೆ. ಅದೇ ವಿಷಯ ಪ್ರಸ್ತಾಪಿಸಿರುವ ಪತ್ರಿಕಾ ರಂಗದ ಅನೇಕರಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪ್ರಕಟಿಸುವ ಹಕ್ಕು ಅವರಿಗಿದೆ. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಹಕ್ಕು ಇದೆ. ಆದರೆ, ಬರೀ ಮಹೇಶ್ ಹೆಗಡೆ ಮಾತ್ರ ನಿಮ್ಮ ಕಣ್ಣಿಗೆ ಕಾಣುತ್ತಿದ್ದಾರೆ. ಸಮಗ್ರವಾಗಿ ತನಿಖೆ ಮಾಡುವುದಾದರೆ ಎಲ್ಲವನ್ನೂ ಮಾಡಬೇಕು. ಅನಗತ್ಯವಾಗಿ ಎಂ.ಬಿ.ಪಾಟೀಲ್ ವಿಷಯ ಪ್ರಸ್ತಾಪ ಮಾಡಿದ್ದಕ್ಕೆ ಈ ರೀತಿ ಮಾಡಲಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳೋ, ಗೃಹ ಸಚಿವರೋ ಯಾರೋ ನಿರ್ದೇಶನ ನೀಡಿದ್ದಾರೆ. ಕೂಡಲೇ ಮಹೇಶ್ ಹೆಗಡೆ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲದೇ ಇದ್ದಲ್ಲಿ ಬಿಜೆಪಿ ಬೀದಿಗಿಳಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಮೋದಿ ಪರ ಕೆಲಸ ಮಾಡಿದ ಹಾಗೂ ಸುಮಲತಾ ಪರ ಕೆಲಸ ಮಾಡಿದ ಮಂಡ್ಯದ ಜನರಿಗೆ ಕಿರುಕುಳ ಕೊಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಬರ ಇದೆ. ಬರ ನಿರ್ವಹಣೆ ಕೆಲಸ ಮಾಡುವುದು ಒಳ್ಳೆಯದು. ಒಂದು ತಿಂಗಳವರೆಗೆ ಇರುವ ಸರ್ಕಾರ ಕನಿಷ್ಠ ಹೋಗುವಾಗಲಾದರೂ ಕೇಂದ್ರದ ಹಣ ಬಳಸಿ ಜನರಿಗೆ ಒಳ್ಳೆಯದನ್ನು ಮಾಡಲಿ ಎಂದು ಲೇವಡಿ ಮಾಡಿದರು.
ಬೆಂಗಳೂರು ಸೇರಿಸಿ ಅನೇಕ ಕಡೆಗಳಲ್ಲಿ ಕೊನೆ ಕ್ಷಣದಲ್ಲಿ ಮತಪಟ್ಟಿಯಿಂದ ಹೆಸರುಗಳನ್ನು ಬಿಡಲಾಗಿದೆ. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳಿಗೆ ಕೊಡುವ ಪಟ್ಟಿ ಬೇರೆ, ಪೋಲಿಂಗ್ ರಿಟರ್ನಿಂಗ್ ಅಧಿಕಾರಿಗೆ ಕೊಡುವ ಪಟ್ಟಿಯೇ ಬೇರೆ. ಕೊನೆ ಕ್ಷಣದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಅದರ ಮೇಲೆ ಡಿಲೀಟೆಡ್ ಎಂದು ಸೀಲ್ ಹಾಕಿ ಕೊಟ್ಟಿರುವ ಅನೇಕ ಉದಾಹರಣೆಗಳು ನಮ್ಮ ಬಳಿ ಇವೆ. ಆ ಎಲ್ಲಾ ಸಂಗತಿಗಳನ್ನು ಸಂಗ್ರಹಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ಬಿದ್ದರೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ ಮಾಡಲಿದ್ದೇವೆ ಎಂದರು.