ಬೆಂಗಳೂರು: 2020-21ನೇ ಸಾಲಿನ ಪೂರಕ ಅಂದಾಜು 3,320.40 ಕೋಟಿ ರೂ.ಗಳ ಎರಡನೇ ಕಂತಿಗೆ ವಿಧಾನಸಭೆ ಅನುಮೋದನೆ ನೀಡಿತು.
ಈ ಸಂಬಂಧದ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ಕಾರ ಈ ಹಿಂದೆ ಪೂರಕ ಅಂದಾಜಿನ ಮೊದಲನೇ ಕಂತು 4,800 ಕೋಟಿ ರೂ.ಗಳಿಗೆ ಮಂಡಿಸಿತ್ತು. ಈ ಬಾರಿ 3,320.40 ಕೋಟಿ ರೂ.ಗಳಿಗೆ ಎರಡನೇ ಕಂತು ಮಂಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹ ಕಡಿಮೆಯಾಗುತ್ತದೆ. ಸರ್ಕಾರ ಇಷ್ಟು ದುಡ್ಡನ್ನು ಹೇಗೆ ಭರಿಸುತ್ತದೆ, ಯಾವ ಬಾಬ್ತುಗಳಲ್ಲಿ ಕಡಿಮೆ ಮಾಡುತ್ತೀರಾ, ಈ ವರ್ಷಕ್ಕೆ ಇನ್ನೂ ಎರಡು ಕಂತುಗಳು ಬಂದರೂ ಬರಬಹುದು. ತೆರಿಗೆ ವಸೂಲಿ ಆಗಿಲ್ಲ, ಜಿಎಸ್‍ಟಿಯಲ್ಲಿ ನಿರೀಕ್ಷಿತ ದುಡ್ಡು ಬಂದಿಲ್ಲ. ಯಾವ ಮೂಲದಿಂದ ಕ್ರೋಢೀಕರಣ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಸುಮಾರು 2,800 ಕೋಟಿ ರೂ.ಗಳಷ್ಟು ಕೇವಲ ಸಂಬಳ, ಸಾರಿಗೆಗೆ ಹೋಗುತ್ತಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ, ವಿಶೇಷಚೇತನರ ವೇತನ, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನಿಂತು ಹೋಗಿದೆ. ಇದರಲ್ಲಿ ಆ ವಿಷಯಗಳೇ ಕಾಣುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೂಡಲೇ ಪಿಂಚಣಿ ಹಣ ಬಿಡುಗಡೆ:
ಇದೇ ವೇಳೆ ಮಧ್ಯ ಪ್ರವೇಶಿಸಿದ ಸಿಎಂ ಯಡಿಯೂರಪ್ಪ, 69 ಲಕ್ಷ ಜನರಿಗೆ ವಿವಿಧ ಬಗೆಯ ಪಿಂಚಣಿ ನೀಡಲಾಗುತ್ತಿದೆ. ಅಕ್ಟೋಬರ್ವರೆಗೆ 67.05 ಲಕ್ಷ ಜನರಿಗೆ ಪಿಂಚಣಿ ಕೊಡಲಾಗಿದೆ ಎಂದು ತಿಳಿಸಿದರು. ಆಧಾರ್ ಜೋಡಣೆ ಸೇರಿದಂತೆ ಇನ್ನಿತರ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಗೊಂದಲ ಆಗಿದೆ. ಅದನ್ನು ಬಗೆಹರಿಸಿ ಉಳಿದವರಿಗೂ ಪಿಂಚಣಿ ಸಿಗುವಂತೆ ಕ್ರಮ ಜರುಗಿಸಲಾಗುವುದು ಎಂದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜ್ಯದಲ್ಲಿ ಪಿಂಚಣಿದಾರರ ಖಾತೆಗಳಿಗೆ ಆಧಾರ್ ಜೋಡಣೆ ಮಾಡುತ್ತಿದ್ದೇವೆ. ತಾಲೂಕು ಕಚೇರಿಗಳು, ಅಂಚೆ ಕಚೇರಿಗಳಲ್ಲಿ ಪಿಂಚಣಿದಾರರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಆಧಾರ್ ಜೋಡಣೆಗೆ ಚಾಲನೆ ನೀಡಿರುವುದರಿಂದ ಈವರೆಗೆ 3-4 ಲಕ್ಷ ನಕಲಿ ಕಾರ್ಡ್‍ಗಳನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ವಾರ್ಷಿಕವಾಗಿ 400-500 ಕೋಟಿ ರೂ.ಗಳು ಬೋಗಸ್ ಆಗಿ ಹೋಗುತ್ತಿತ್ತು. ಮೃತಪಟ್ಟಿರುವವರ ಖಾತೆಗಳಿಗೂ ಪಿಂಚಣಿ ಹೋಗುತ್ತಿತ್ತು. ಆಧಾರ್ ಸಂಖ್ಯೆ ಜೋಡಣೆಗೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ ಎಂದರು.
ಪಿಂಚಣಿದಾರರು ಸಲ್ಲಿಸುವ ಆಧಾರ್ ಕಾರ್ಡ್‍ನಲ್ಲಿಯೇ ಅವರ ವಯಸ್ಸಿನ ದೃಢೀಕರಣವಾಗುತ್ತದೆ. ಆದಾಯ ಪ್ರಮಾಣಪತ್ರ ನಮ್ಮ ಬಳಿ ಇರುತ್ತದೆ. ಬ್ಯಾಂಕ್ ಖಾತೆಯ ಪಾಸ್ಬುಕ್ ಮಾತ್ರ ನಾವು ಕೇಳುತ್ತೇವೆ. ಅಲ್ಲದೆ ಅಂಚೆ ಕಚೇರಿಗಳ ಮೂಲಕ ಪಿಂಚಣಿ ವಿತರಿಸುವುದನ್ನು ರದ್ದು ಮಾಡಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗಾಗಿ 1,100 ಕೋಟಿಗೆ ಅಸ್ತು:
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1,100 ಕೋಟಿ ರೂ. ಅನುಮೋದನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಜೆಟ್‍ನಲ್ಲಿ 1,500 ಕೋಟಿ ರೂ. ಅನುದಾನ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. 1100 ಕೋಟಿ ರೂ.ಗಳಿಗೆ ಕ್ರಿಯಾ ಯೋಜನೆ ಬಂದಿದೆ. ಈವರೆಗೆ ಅದಕ್ಕೆ ಅನುಮೋದನೆ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಸಂಕಷ್ಟದ ಸಂದರ್ಭದಲ್ಲಿಯೂ 1,100 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಆದಷ್ಟು ಬೇಗ ಕೆಲಸಗಳು ಆರಂಭವಾಗುತ್ತವೆ ಎಂದರು. ಇದೇ ವೇಳೆ ಪೂರಕ ಅಂದಾಜಿನ ಎರಡನೇ ಕಂತಿನ ಜೊತೆಗೆ ಮುಖ್ಯಮಂತ್ರಿ ಮಂಡಿಸಿದ 2020ನೇ ಸಾಲಿನ ಕರ್ನಾಟಕ ಧನ ವಿನಿಯೋಗ ವಿಧೇಯಕ ಸಂಖ್ಯೆ 4ಕ್ಕೆ ಅನುಮೋದನೆ ಸಿಕ್ಕಿತು.
ಪೂರಕ ಅಂದಾಜು ಎಷ್ಟು?:
ಕೃಷಿ ಮತ್ತು ತೋಟಗಾರಿಕೆ-192 ಕೋಟಿ ರೂ., ಪಶುಸಂಗೋಪನೆ ಮತ್ತು ಮೀನುಗಾರಿಕೆ-396 ಕೋಟಿ ರೂ., ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ-121 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ-185 ಕೋಟಿ ರೂ., ಸಹಕಾರ-423 ಕೋಟಿ ರೂ., ಸಮಾಜ ಕಲ್ಯಾಣ-352 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ-392 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು-712 ಕೋಟಿ ರೂ., ಕಂದಾಯ-219 ಕೋಟಿ ರೂ., ವಸತಿ-155 ಕೋಟಿ ರೂ., ಜಲಸಂಪನ್ಮೂಲ-368 ಕೋಟಿ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ-617 ಕೋಟಿ ರೂ. ಸೇರಿದಂತೆ ಒಟ್ಟು 3320.40 ಕೋಟಿ ರೂ.ಗಳನ್ನು ಪೂರಕ ಅಂದಾಜು ಹೊಂದಿದೆ.