ಬೆಂಗಳೂರು: ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜಧಾನಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಐಟಿ ಹಬ್ ಎಂದೇ ಕರೆಯಿಸಿಕೊಳ್ಳುವ ಪೂರ್ವ ವಿಭಾಗದ ವೈಟ್ ಫೀಲ್ಡ್, ಮಾರತ್ ಹಳ್ಳಿ, ಬೆಳ್ಳಂದೂರು, ಮಹದೇವಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಡಿಕೆಗಿಂತ ಮೂರು ಪಟ್ಟು ಸುರಿದ ಮಹಾಮಳೆಗೆ ಸವಾರರು ಕಂಗಲಾಗಿದ್ದಾರೆ.
ರಸ್ತೆಗಳ ಜೊತೆಗೆ ಅಪಾರ್ಟ್ಮೆಂಟ್ ನೆಲಮಹಡಿ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬಡಾವಣೆಗಳು, ಕಿರಿದಾದ ರಸ್ತೆಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ಆವರಿಸಿಕೊಂಡು ಕೆರೆಯಂತಾಗಿವೆ. ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿರುವ ಸಂಚಾರ ವ್ಯವಸ್ಥೆಯನ್ನ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರಂತೂ ಶತಪ್ರಯತ್ನ ನಡೆಸುತ್ತಿದ್ದಾರೆ. ಇವರ ಕಾರ್ಯವೈಖರಿಗೆ ರಾಜಧಾನಿಯ ಜನರು ಶಾಘ್ಲನೆ ವ್ಯಕ್ತಪಡಿಸುತ್ತಿದ್ದಾರೆ.
ಮಳೆಯಿಂದಾಗಿ ತೊಂದರೆಯಾಗಿರುವ ಮಾರ್ಗಗಳಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ಥಳದಲ್ಲಿ ಬೀಡು ಬಿಟ್ಟಿರುವ ಸಂಚಾರಿ ಪೊಲೀಸರು ರೈನ್ ಕೋಟ್ ಧರಿಸಿ ಮಳೆ ನಡುವೆಯೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಲ್ಲೆಲ್ಲಿ ಮಳೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆಯೋ ಆ ಸ್ಥಳಗಳಲ್ಲಿ ಪೊಲೀಸರು ಸುಗಮ ಸಂಚಾರಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಮತ್ತೊಂದೆಡೆ ಜಲಾವೃತ್ತಗೊಂಡಿರುವ ರಸ್ತೆ ಮಾರ್ಗಗಳಲ್ಲಿ ಸಂಚಾರ ದಟ್ಟಣೆಯಾಗದಂತೆ ಟ್ರಾಫಿಕ್ ಡೈವರ್ಷನ್ ಮಾಡುತ್ತಿದ್ದಾರೆ. ಬೆಳ್ಳಂದೂರು ಇಕೋ ಸ್ಪೆಸ್ ಬಳಿ ರಸ್ತೆ ತುಂಬಾ ನೀರು ತುಂಬಿದ್ದ ಪರಿಣಾಮ ಮಡಿವಾಳ ಸಂಚಾರ ಪೊಲೀಸರು ಮೈಕ್ ಹಿಡಿದು ಮಾಹಿತಿ ನೀಡುತ್ತಿದ್ದಾರೆ. ಅಲ್ಲದೇ ಬೆಂಗಳೂರು ಸಂಚಾರ ಪೊಲೀಸರ ಟ್ವಿಟರ್ ಹಾಗೂ ಫೇಸ್ಬುಕ್ ಮುಖಾಂತರ ಪೋಸ್ಟ್ ಮಾಡಿ ಆಗಬಹುದಾದ ಸಂಚಾರ ದಟ್ಟಣೆ ತಕ್ಕಮಟ್ಟಿಗೆ ನಿಯಂತ್ರಿಸುತ್ತಿದ್ದಾರೆ.
ಬಾಣಸವಾಡಿ, ಚಿಕ್ಕಪೇಟೆ ವಿವಿಧ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಳೆ ನಡುವೆಯೂ ರಸ್ತೆಯಲ್ಲಿ ತುಂಬಿದ್ದ ನೀರನ್ನು ಚರಂಡಿಗೆ ಹರಿಯುವಂತೆ ಮಾಡಿ ಯೋಗ್ಯ ಸಂಚಾರಕ್ಕೆ ಅನುವು ಮಾಡುತ್ತಿದ್ದಾರೆ. ನೀರಿನಲ್ಲಿ ಕೆಟ್ಟು ನಿಂತಿರುವ ವಾಹನಗಳಿಗೂ ಪೊಲೀಸರು ಸಾಥ್ ನೀಡಿ ಮುಂದೆ ಹೋಗಲು ನೆರವು ನೀಡುತ್ತಿದ್ದಾರೆ. ಮೂಲ ಸೌರ್ಕಯ ಕಲ್ಪಿಸದ ಸ್ಥಳೀಯ ಸಂಸ್ಥೆಗಳ ವಿರುದ್ಧ ಸಾರ್ವಜನಿಕರು ಕೆಂಡಕಾರಿದ್ದಾರೆ. ಬಿಬಿಎಂಪಿ ಸಿಬ್ಬಂದಿ ಮಾಡಬೇಕಾದ ಕೆಲಸವನ್ನ ಟ್ರಾಫಿಕ್ ಪೊಲೀಸರು ಮಾಡುತ್ತಿರುವ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಗೋಕಾಕ್‌ನಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 12 ದಿನದ ಹಸುಗೂಸು, ಬಾಣಂತಿಯ ರಕ್ಷಣೆಯೇ ರೋಚಕ!