ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟಕ್ಕೆ ಸರ್ಕಾರವೇ ತಲೆದೂಗಿದ್ದು, ಇದಕ್ಕೆ ಪೂರಕವೆಂಬಂತೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನ ರದ್ದು ಮಾಡಲಾಗಿದೆ. ಇತ್ತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಎರಡು ದಿವಸ ಪರೀಕ್ಷೆ ನಡೆಸುವ ಮೂಲಕ ಕಲಿಕಾ ಮಟ್ಟ ನಿರ್ಧರಿಸಲಿದೆ. ಸದ್ಯ ಸರ್ಕಾರದ ಈ ನಿರ್ಧಾರಕ್ಕೆ ಶಾಲಾ ಸಂಘಟನೆಗಳು, ಪೋಷಕ ಸಂಘಟನೆಗಳಿಂದ ಪರ-ವಿರೋಧ ವ್ಯಕ್ತವಾಗಿದೆ.
ಸರ್ಕಾರದ ನಡೆ ಕುರಿತು ಪ್ರತಿಕ್ರಿಯಿಸಿರುವ ರೂಪ್ಸಾ ( ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ) ದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ಬಹಳ ತಡವಾಗಿ ನಡೆಸುತ್ತಿರುವುದು ಬೇಸರ ತಂದಿದೆ. ಕಾರಣ ಈಗಾಗಲೇ ಸಿಬಿಎಸ್ಸಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್ ಆಗಿ ಪ್ರಥಮ ಪಿಯುಸಿಗೂ ದಾಖಲಾಗಿ, ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಅಂತ ತಿಳಿಸಿದರು.
ನಂತರ ಮುಂದುವರಿದು, ದ್ವಿತೀಯ ಪಿಯುಸಿ ರದ್ದಾಗಿರುವ ವಿಷಯದಲ್ಲಿ ಏಕ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಮೇಲೆ ಅವರು ನಿರ್ಧಾರ ಪ್ರಕಟಿಸಿದ್ದಾರೆ. ಆದರೆ, ದುರದೃಷ್ಟಕರ ಎಂಬಂತೆ ಪರೀಕ್ಷೆ ನಡೆಸಲು ನಮ್ಮ ಬಳಿ ವ್ಯವಸ್ಥೆಯಿಲ್ಲ ಎಂಬುದರ ಮೂಲಕ ಸರ್ಕಾರನೇ ಒಪ್ಪಿಕೊಂಡಂತೆ ಆಗಿದೆ ಅಂದರು.
ಕಲಿಕಾ ಮಟ್ಟದ ದೃಷ್ಟಿಯಿಂದ ಪರೀಕ್ಷೆ: ಕ್ಯಾಮ್ಸ್ನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನ ಸರಳವಾಗಿ ನಡೆಸಲು ತೀರ್ಮಾನಿಸಿರುವುದು ಆರೋಗ್ಯಕರ ಬೆಳವಣಿಗೆ. ಮಕ್ಕಳ ಕಲಿಕೆಗೆ ನ್ಯಾಯವನ್ನ ಒದಗಿಸುವಂತಾಗುತ್ತೆ ಎಂದು ತಿಳಿಸಿದರು. ಆದರೆ, ಅದೇ ದ್ವಿತೀಯ ಪಿಯುಸಿ ವಿಷ್ಯಕ್ಕೆ ಬಂದಾಗ ಕೊಂಚ ಅಸಮಾಧಾನ ಇದ್ದು, ಸರಳವಾದ ರೀತಿಯಲ್ಲೂ ಆ ವಿದ್ಯಾರ್ಥಿಗಳ ಕಲಿಕಾ ಮಟ್ಟದ ದೃಷ್ಟಿಯಿಂದ ಪರೀಕ್ಷೆಯನ್ನ ನಡೆಸಬೇಕಿತ್ತು ಎಂದರು.
ಖಾಸಗಿ ಶಾಲಾ ಪೋಷಕರ ಸಂಘದ ಸಮನ್ವಯ ಸಮಿತಿ ಸದಸ್ಯರು ಸರ್ಕಾರದ ನಿರ್ಧಾರವನ್ನ ಸ್ವಾಗತಿಸಿದರೆ, ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಗಳನ್ನು ರದ್ದು ಮಾಡಿರುವ ನಿರ್ಧಾರವನ್ನು ಸಮಿತಿ ಸದಸ್ಯ ಬಿಎಸ್ ಯೋಗಾನಂದ ಸ್ವಾಗತಿಸುತ್ತಿದ್ದಾರೆ.
ಸೋಂಕು ತಗುಲುವ ಭೀತಿ ಇದೆ: ಆದರೆ, ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಬೇಕೆಂಬ ಒತ್ತಾಯ ಮಾಡಲಾಗಿದ್ದು, ಮಕ್ಕಳಲ್ಲಿ ಸೋಂಕು ತಗುಲುವ ಭೀತಿ ಇದೆ. ಪರೀಕ್ಷೆ ನಡೆಸುವ ಸಂಬಂಧ ಮರುಪರಿಶೀಲಿಸಬೇಕು ಅಂತ ಮನವಿ ಮಾಡಿದ್ದಾರೆ. ಈ ಹಿಂದಿನ ಕಲಿಕಾ ಸಾಮಾರ್ಥ್ಯದ ಆಧಾರದ ಮೇಲೆ ಪಾಸ್ ಮಾಡುವಂತೆ ತಿಳಿಸಿದ್ದಾರೆ.
ಓದಿ: ಜೇಬು ಸುಡುತ್ತಿದೆ ಇಂಧನ ದರ: ಕರ್ನಾಟಕದಲ್ಲೂ ಶತಕದ ಸಮೀಪ ಪೆಟ್ರೋಲ್ ಬೆಲೆ