ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್‌ಆರ್‌ಟಿಸಿ) ನಿರ್ವಾಹಕರೊಬ್ಬರ ಕರ್ತವ್ಯ ಪ್ರಜ್ಞೆಯಿಂದ ಚಾಲಾಕಿ ಕಳ್ಳರಿಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಮಂಗಳೂರಿನ ಎರಡನೇ ಘಟಕದ ಕ್ಲಬ್ ಕ್ಲಾಸ್ ವೋಲ್ವೋ ಬಸ್ ಮುಂಜಾನೆ 5 ಗಂಟೆಯ ಸುಮಾರಿಗೆ ಉಪ್ಪಿನಂಗಡಿಯ ಗಡಿಯಾರದ ಬಳಿ ತಲುಪಿದಾಗ ಬಸ್ನಲ್ಲಿದ್ದ ಒಬ್ಬ ಪ್ರಯಾಣಿಕ ತುರ್ತಾಗಿ ನೈಸರ್ಗಿಕ ಕರೆಗೆ ಹೋಗಬೇಕು ಎಂದು ಬಸ್ ನಿಲ್ಲಿಸಲು ಹೇಳಿದ್ದರು. ಚಾಲಕ ಮತ್ತು ನಿರ್ವಾಹಕರು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅವಕಾಶ ಮಾಡಿಕೊಟ್ಟಿದ್ದಾರೆ.
ಸುಮಾರು ಐದು ನಿಮಿಷದ ನಂತರ ಇನ್ನೊಬ್ಬ ಪ್ರಯಾಣಿಕ ಕೂಡ ನೈಸರ್ಗಿಕ ಕರೆಗಾಗಿ ಹೋಗುವುದಾಗಿ ತಿಳಿಸಿ ವಾಹನದಿಂದ ಇಳಿದು ಹೋಗಿದ್ದಾರೆ. ಸುಮಾರು 10 ನಿಮಿಷ ಕಳೆದರೂ ಇಬ್ಬರೂ ಪ್ರಯಾಣಿಕರು ಬಾರದಿದ್ದ ಹಿನ್ನೆಲೆಯಲ್ಲಿ ಅವರಿಗೆ ಫೋನ್ ಮಾಡಿದ್ದಾರೆ. ಆದರೆ ಇಬ್ಬರ ಮೊಬೈಲ್ ಕೂಡ ಸ್ವಿಚ್ ಆಫ್ ಬಂದಿದೆ. 15 ನಿಮಿಷಗಳವರೆಗೆ ಬಸ್ ಕಂಡಕ್ಟರ್, ಡ್ರೈವರ್, ಸಹ ಪ್ರಯಾಣಿಕರು ಹಾಗೂ ಸ್ಥಳೀಯರ ನೆರವಿನಿಂದ ಸುತ್ತಮುತ್ತದ ಸ್ಥಳಗಳನ್ನು ಪರಿಶೀಲಿಸಿ, ಇಬ್ಬರೂ ಸಿಗದಿರುವ ಕಾರಣ ಫೋನ್ ಮೂಲಕ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಅವರ ಸೂಚನೆಯಂತೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಬಸ್ಸಿನಲ್ಲಿರುವ ಎಲ್ಲ ಪ್ರಯಾಣಿಕರಿಗೆ ತಮ್ಮ ಲಗೇಜ್ಗಳನ್ನು ಪರಿಶೀಲಿಸುವಂತೆ ತಿಳಿಸಿದ್ದರು.
ಎಲ್ಲ ಪ್ರಯಾಣಿಕರು ತಮ್ಮ ಲಗೇಜ್ಗಳು ಸರಿಯಾಗಿವೆ ಎಂದು ತಿಳಿಸಿದ ಕಾರಣ ಬಸ್ ಅಲ್ಲಿಂದ ಹೊರಟಿತ್ತು. ಅದೇ ದಿನ ಬೆಳಗ್ಗೆ ಸುಮಾರು 10 ಗಂಟೆಯ ಸುಮಾರಿಗೆ ಪ್ರಯಾಣಿಕರಾದ ಲಕ್ಷ್ಮಿ ಎಂಬವರು ನಿರ್ವಾಹಕರಿಗೆ ಕರೆ ಮಾಡಿ ತಮ್ಮ ಬ್ಯಾಗ್ ಒಳಗಡೆ ಇಟ್ಟಿದ್ದ ಸುಮಾರು ಎರಡೂವರೆ ಲಕ್ಷ ರೂ ಮೌಲ್ಯದ ಚಿನ್ನ ಮತ್ತು ಹಣ ಕಳೆದು ಹೋಗಿರುವುದಾಗಿ ತಿಳಿಸಿದ್ದರು. ನಿರ್ವಾಹಕರು ಮಹಿಳೆಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತಿಳಿಸಿದ್ದರು.
ಬಸ್ನ ಟ್ರಿಪ್ ಶೀಟ್ ಪರಿಶೀಲಿಸಿ ಆ ಇಬ್ಬರು ಪ್ರಯಾಣಿಕರಿಗೆ ಕರೆ ಮಾಡಿದರೆ ಮತ್ತೆ ಸ್ವಿಚ್ ಆಫ್ ಎಂದೇ ಬಂದಿದೆ. ಅವತಾರ್ ಬುಕ್ಕಿಂಗ್ನಲ್ಲಿ ಫೋನ್ ನಂಬರ್ ಟ್ರ್ಯಾಕ್ ಮಾಡಿದಾಗ ಇಬ್ಬರೂ ಸತತವಾಗಿ ಕ್ಲಬ್ ಕ್ಲಾಸ್ ವೋಲ್ವೋ ವಾಹನದಲ್ಲಿ ಪ್ರಯಾಣಿಸಿರುವುದು ಕಂಡುಬಂದಿದೆ. ಈ ವಿವರಗಳನ್ನು ಒಡವೆ, ಹಣ ಕಳೆದುಕೊಂಡವರಿಗೆ ನೀಡಿ ದೂರು ನೀಡುವಂತೆ ಬಸ್ ಸಿಬ್ಬಂದಿ ತಿಳಿಸಿದ್ದರು. ಅದರಂತೆ ಮಹಿಳೆ ಪುತ್ತೂರು ಹಾಗೂ ಬೆಂಗಳೂರಿನಲ್ಲಿ ದೂರು ನೀಡಿದ್ದರು.
ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ನವೆಂಬರ್ 12 ರಂದು ಸಿಲಿಕಾನ್ ಸಿಟಿಯ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ರಾತ್ರಿ ಮಂಗಳೂರಿಗೆ ಹೊರಡಲು ಫ್ಲಾಟ್ ಫಾರಂನಲ್ಲಿ ನಿಂತಿದ್ದು, ಇಬ್ಬರು ಪ್ರಯಾಣಿಕರು ಬೇಗನೆ ಬಂದು ಸೀಟ್ನಲ್ಲಿ ಕುಳಿತಿರುವುದನ್ನು ನಿರ್ವಾಹಕ ಅಶೋಕ್ ಜಾದವ್ ಗಮನಿಸಿದ್ದಾರೆ. ಅನುಮಾನಗೊಂಡು ಹತ್ತಿರ ಹೋಗಿ ಪರಿಶೀಲಿಸಿದಾಗ ಅವರು ಈ ಹಿಂದೆ ಒಡವೆ ಕದ್ದು ಪರಾರಿಯಾಗಿದ್ದ ಪ್ರಯಾಣಿಕರು ಎಂಬುದು ತಿಳಿದು ಬಂದಿದೆ. ಯಾವುದೇ ಅನುಮಾನ ಬಾರದಂತೆ ನಿರ್ವಾಹಕರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಸಿಬ್ಬಂದಿ ಇಬ್ಬರು ಪ್ರಯಾಣಿಕರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಹಿಂದೆ ಬಸ್ಸಿನಲ್ಲಿ ಒಡವೆ ಹಾಗೂ ಹಣ ಕಳೆದುಕೊಂಡ ಲಕ್ಷ್ಮಿ ಅವರಿಗೆ ಹಾಗೂ ಪುತ್ತೂರು ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದೆ ಎಂದು ನಿರ್ವಾಹಕ ಜಾದವ್ ತಿಳಿಸಿದರು.
ನಾಲ್ಕು ತಿಂಗಳ ಹಿಂದೆ ಕಳ್ಳತನ ಮಾಡಿ ಇಳಿದು ಹೋಗಿದ್ದ ಪ್ರಯಾಣಿಕರ ಮುಖಚಹರೆ ನೆನಪಿನಲ್ಲಿಟ್ಟುಕೊಂಡು, ಗುರುತಿಸಿ ಕಳ್ಳರನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ ನಿರ್ವಾಹಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ಎಂಡಿ ವಿ. ಅನ್ಬುಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಯುವತಿಯ ಮೊಬೈಲ್ ದರೋಡೆ: ಕಳ್ಳನನ್ನು ಬೆನ್ನಟ್ಟಿ ಡೆಲಿವರಿ ಬಾಯ್ ಸಾಹಸ.. ಆರೋಪಿ ಅಂದರ್