ಬೆಂಗಳೂರು: ಸರ್ಕಾರದ ಪರ ವಕೀಲರಾಗಿದ್ದ ವಿಜಯಕುಮಾರ್ ಎ.ಪಾಟೀಲ್ ಹಾಗೂ ಹೈಕೋರ್ಟ್ ವಕೀಲ ರಾಜೇಶ್ ರೈ ಕಲ್ಲಂಗಳ ಅವರನ್ನು ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯ ಮೂರ್ತಿಗಳಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಸಂಬಂಧ ಕೇಂದ್ರ ಕಾನೂನು ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ. ಇಬ್ಬರೂ ಎರಡು ವರ್ಷಗಳ ಕಾಲ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಕೆಲಸ ನಿರ್ವಹಿಸಲಿದ್ದು ನಂತರ ಅವರ ಸೇವೆ ಕಾಯಂಗೊಳ್ಳಲಿದೆ.
ಇತ್ತೀಚೆಗಷ್ಟೇ ರಾಮಚಂದ್ರ ಡಿ.ಹುದ್ದಾರ ಹಾಗೂ ವೆಂಕಟೇಶ್ ಟಿ.ನಾಯಕ್ ಅವರನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶರ ವಿಭಾಗದಿಂದ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದನ್ನೋತಿ ನೀಡಲಾಗಿತ್ತು. ಕೆಲವೇ ದಿನಗಳ ಅಂತರದಲ್ಲಿ ಹೈಕೋರ್ಟ್ ವಕೀಲರ ವಿಭಾಗದಿಂದ ಇಬ್ಬರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ 62 ಇದ್ದು, ವಿಜಯಕುಮಾರ್ ಎ.ಪಾಟೀಲ್ ಹಾಗೂ ರಾಜೇಶ್ ರೈ ಕಲ್ಲಂಗಳ ಅವರ ನೇಮಕದಿಂದ ಈಗ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 53ಕ್ಕೆ ಏರಿಕೆಯಾಗಿದೆ. 2023ರ ಸಾಲಿನ ಮೇ 21ಕ್ಕೆ ನ್ಯಾಯಮೂರ್ತಿ ಪಿ.ಎನ್.ದೇಸಾಯಿ ನಿವೃತ್ತಿ ಹೊಂದಲಿದ್ದರೆ ಮೇ 31ಕ್ಕೆ ನ್ಯಾಯಮೂರ್ತಿ ಬಿ.ವೀರಪ್ಪ ರಿಟೈರ್ಡ್ ಆಗಲಿದ್ದಾರೆ.
50 ದಾಟಿದ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆ: ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 45ರಿಂದ ಈವರೆಗೂ ಏರಿಕೆ ಆಗಿದ್ದೇ ಇಲ್ಲ. ಇದೇ ಮೊದಲ ಬಾರಿಗೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 50 ದಾಟಿದೆ. ಇದರಿಂದಾಗಿ ಸರ್ಕಾರ, ಸಾರ್ವಜನಿಕರು ಮತ್ತು ನ್ಯಾಯಾಲಯಕ್ಕೆ ಬರುವ ಸಾಮಾನ್ಯ ಜನರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ವಕೀಲರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಐವರು ನ್ಯಾಯಮೂರ್ತಿಗಳಿಗೆ ಪ್ರಮಾಣ ಬೋಧಿಸಿದ ಸಿಜೆಐ ( ನವದೆಹಲಿ): ಸುಪ್ರೀಂಕೋರ್ಟ್‌ಗೆ ಇಂದು ಹೊಸ ಐವರು ನ್ಯಾಯಮೂರ್ತಿಗಳು ಬಂದಿದ್ದಾರೆ. ಹಲವು ದಿನಗಳ ಸಂಘರ್ಷದ ಬಳಿಕ ಸುಪ್ರೀಂಕೊಲಿಜಿಯಂ ಶಿಫಾರಸಿಗೆ ಕಳೆದ ಶನಿವಾರ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಅದರ ಅನ್ವಯ ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಐವರು ನ್ಯಾಯಮೂರ್ತಿಗಳಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಬೋಧಿಸಿದರು.
ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ನ್ಯಾಯಮೂರ್ತಿ ಪಂಕಜ್ ಮಿಥಾಲ್ , ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಸಂಜಯ್ ಕರೋಲ್ , ನ್ಯಾಯಮೂರ್ತಿ ಪಿ.ವಿ. ಸಂಜಯ್ ಕುಮಾರ್, ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ವಿ.ಸಂಜಯ್ ಕುಮಾರ್, ಪಾಟ್ನಾ ಹೈಕೋರ್ಟ್ ನ್ಯಾಯಾಧೀಶ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರಾದ ಮನೋಜ್ ಮಿಶ್ರಾ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.
ಇಂದು ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು, ವಕೀಲರು ಹಾಗೂ ನೂತನ ಜಸ್ಟಿಸ್ಗಳ ಕುಟುಂಬಸ್ಥರು ಉಪಸ್ಥಿತರಿದ್ದರು. ಐವರು ಹೊಸ ಜಸ್ಟೀಸ್ಗಳ ನೇಮಕದೊಂದಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 32 ಕ್ಕೆ ಏರಿದೆ.
ಇದನ್ನೂ ಓದಿ:ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾತಿ ಪದ್ಧತಿ ಹೋಗಲಾಡಿಸಬೇಕು: ಹೈಕೋಟ್ ನ್ಯಾಯಮೂರ್ತಿ ಬಿ ವೀರಪ್ಪ