ಬೆಂಗಳೂರು: ಉಭಯ ಸದನಗಳ ಪ್ರತಿಪಕ್ಷ ನಾಯಕರು ಮತ್ತು ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಪಕ್ಷದ ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿದ ಕೇಂದ್ರದ ವೀಕ್ಷಕರು, ಇಂದು ನವದೆಹಲಿಗೆ ವಾಪಸ್ ಆದರು, ದೆಹಲಿಗೆ ತೆರಳುವ ಮುನ್ನ ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ಚರ್ಚಿಸಿದರು.
ಕೇಂದ್ರದಿಂದ ವೀಕ್ಷಕರಾಗಿ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಅಪರಾಹ್ನ 12 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೂ ಪ್ರಮುಖರ ಅಭಿಪ್ರಾಯ ಸಂಗ್ರಹ ಮಾಡಿದರು. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಒಬ್ಬೊಬ್ಬ ನಾಯಕರನ್ನೇ ಕರೆಯಿಸಿಕೊಂಡು ಪ್ರತಿಪಕ್ಷ ನಾಯಕ ಮತ್ತು ರಾಜ್ಯಾಧ್ಯಕ್ಷರ ನೇಮಕದ ಕುರಿತು ಅಭಿಪ್ರಾಯ ಸಂಗ್ರಹಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು,ಆರಗ ಜ್ಞಾನೇಂದ್ರ, ಸಂಸದರಾದ ಡಿ.ವಿ ಸದಾನಂದಗೌಡ, ಪಿಸಿ ಮೋಹನ್, ಶಾಸಕರಾದ ಡಾ.ಅಶ್ವತ್ಥನಾರಾಯಣ, ಮುನಿರತ್ನ, ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ, ಕೋಟಾ ಶ್ರೀನಿವಾಸ್ ಪೂಜಾರಿ, ಕೆ ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು, ಶಶಿಕಲಾ ಜೊಲ್ಲೆ, ಬಸನಗೌಡ ಪಾಟೀಲ್ ಯತ್ನಾಳ್, ಪ್ರಭು ಚೌಹಾಣ್, ದಿನಕರ್ ಶೆಟ್ಟಿ ಮತ್ತಿತರರು ಆಗಮಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸತತವಾಗಿ ಏಳು ಗಂಟೆಗಳ ಕಾಲ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಸಲಾಯಿತು.
ಬಿಎಸ್ವೈ ಜೊತೆಗೆ ಚರ್ಚೆ: ಆಯ್ದ ನಾಯಕರ ಅಭಿಪ್ರಾಯ ಸಂಗ್ರಹ ಮುಗಿಸಿದ ನಂತರ ಸಂಜೆ ಏಳು ಗಂಟೆಗೆ ಪಕ್ಷದ ಕಚೇರಿಯಿಂದ ನಿರ್ಗಮಿಸಿದ ಮನ್ಸುಖ್ ಮಾಂಡವೀಯ ಮತ್ತು ವಿನೋದ್ ತಾವಡೆ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಗೆ ತೆರಳಿದರು. ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯ ಸದಸ್ಯರೂ ಆಗಿರುವ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದರು.
ಪ್ರತಿಪಕ್ಷ ನಾಯಕರ ಆಯ್ಕೆ ಮತ್ತು ನೂತನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತಂತೆ ಪಕ್ಷದ ಹೈಕಮಾಂಡ್ ನಿರ್ದೇಶದನದಂತೆ ರಾಜ್ಯದ ಆಯ್ದ ನಾಯಕರ ಅಭಿಪ್ರಾಯ ಸಂಗ್ರಹ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಿದರು. ಯಡಿಯೂರಪ್ಪ ಅವರ ಅಭಿಪ್ರಾಯ ಕೂಡ ಬಹಳ ಮುಖ್ಯವಾದ ಹಿನ್ನೆಲೆ ಅವರಿಂದಲೇ ಕೆಲವೊಂದು ಸಲಹೆ ಪಡೆದುಕೊಂಡರು.
ಸಮಾಲೋಚನೆ ನಂತರ ದೆಹಲಿಗೆ ತೆರಳಲು ಮುಂದಾದ ಇಬ್ಬರು ವೀಕ್ಷಕರನ್ನು ಮನೆಯಿಂದ ಹೊರಗೆ ಬಂದು ಯಡಿಯೂರಪ್ಪ ಕಳುಹಿಸಿಕೊಟ್ಟರು. ನಂತರ ಪಕ್ಷದ ನಾಯಕರ ಅಭಿಪ್ರಾಯ, ಯಡಿಯೂರಪ್ಪ ಸಲಹೆಯೊಂದಿಗೆ ಕೇಂದ್ರದ ವೀಕ್ಷಕರು ದೆಹಲಿಗೆ ತೆರಳಿದರು. ವೀಕ್ಷಕರು ದೆಹಲಿ ತಲುಪುತ್ತಿದ್ದಂತೆ ಇಂದು ತಡ ರಾತ್ರಿ ಅಥವಾ ನಾಳೆ ಬೆಳಗ್ಗೆಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ವರದಿ ಸಲ್ಲಿಕೆ ಮಾಡಲಿದ್ದು ಅದರ ಆಧಾರದಲ್ಲಿ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆಯಾಗಲಿದೆ. ಹೈಕಮಾಂಡ್ ನಿಂದಲೇ ಹೆಸರು ಪ್ರಕಟವಾಗಲಿದೆ. ರಾಜ್ಯಾಧ್ಯಕ್ಷರ ಹೆಸರು ನಂತರ ಪ್ರಕಟಿಸಲಾಗುತ್ತದೆ.
ಶೀಘ್ರವೇ ವಿಪಕ್ಷ ನಾಯಕರು ಹೆಸರು ಪ್ರಕಟ:ಈ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ , ಕೇಂದ್ರ ಸಚಿವ ಮನ್ಸುಖ್ ಮಾಂಡವಿಯ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಹಿರಿಯರಾದ ವಿನೋದ್ ತಾವ್ಡೆ ಅವರು ಪ್ರಮುಖ ಪದಾಧಿಕಾರಿಗಳ ಅಭಿಪ್ರಾಯವನ್ನೂ ಸಂಗ್ರಹಿಸಿ ತೆರಳಿದ್ದಾರೆ. ಕೇಂದ್ರದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಇನ್ನೂ ಕೆಲವರ ಜೊತೆ ಚರ್ಚಿಸಿ ರಾಜ್ಯ ಅಧ್ಯಕ್ಷರು ಯಾರು ಮತ್ತು ಯಾರು ವಿಪಕ್ಷ ನಾಯಕರೆಂದು ಪಕ್ಷ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ವೀಕ್ಷಕರು ರಾಜ್ಯಾಧ್ಯಕ್ಷರ ಮತ್ತು ವಿಪಕ್ಷ ನಾಯಕರ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಷ್ಟ್ರೀಯ ನಾಯಕರ ಜೊತೆ ಮಾತನಾಡಿ, ಕರ್ನಾಟಕಕ್ಕೆ ಹೆಸರುಗಳನ್ನು ಸೂಚಿಸಲಿದ್ದಾರೆ. ರಾಜ್ಯ ವಿಧಾನಸಭೆ ಮತ್ತು ಮೇಲ್ಮನೆಯ ವಿಪಕ್ಷ ನಾಯಕರ ಹೆಸರನ್ನು ತಿಳಿಸುತ್ತಾರೆ. ಶೀಘ್ರವೇ ವಿಪಕ್ಷ ನಾಯಕರು ಮತ್ತು ರಾಜ್ಯ ಅಧ್ಯಕ್ಷರ ಕುರಿತ ಮಾಹಿತಿ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ನಾಲ್ಕು ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡಿದ ಬಿಜೆಪಿ.. ಕರ್ನಾಟಕದ್ದು ಯಾವಾಗ?