ಬೆಂಗಳೂರು: ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿನಲ್ಲಿ ಕಳೆದ 69 ವರ್ಷಗಳಿಂದ ಬಿಬಿಎಂಪಿ ಪ್ರಶಸ್ತಿ ನೀಡುತ್ತಾ ಬರ್ತಿದೆ. ಈ ಬಾರಿ 70ನೇ ವರ್ಷದ ಪ್ರತಿಷ್ಟಿತ ಪ್ರಶಸ್ತಿಯನ್ನು ನೀಡುವ ಸಂಬಂಧ ವಿಶೇಷ ಸಮಿತಿ ರಚನೆಗೆ ಪಾಲಿಕೆ ಮುಂದಾಗಿದೆ.
ಇಂದು ಕೆಂಪೇಗೌಡ ಪ್ರಶಸ್ತಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ ಮೇಯರ್, ಕೆಂಪೇಗೌಡ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಜೂನ್ 20 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಲ್ಲದೆ ಈ ಬಾರಿ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳನ್ನು ನೀಡಿ ಪ್ರಶಸ್ತಿಯ ಗೌರವವನ್ನು ಹಾಳುಮಾಡದೆ, ಪ್ರಶಸ್ತಿ ಸಂಖ್ಯೆಯನ್ನು 70 ಅಥವಾ 100ಕ್ಕೆ ಸೀಮಿತಗೊಳಿಸಲು ತೀರ್ಮಾನ ಮಾಡಲಾಗಿದೆ.
ಎಷ್ಟು ಪ್ರಶಸ್ತಿ ನೀಡಬೇಕು, ಯಾವ ರೀತಿ ಆಯ್ಕೆ ಇರಬೇಕು, ಆಯ್ಕೆ ಸಮಿತಿಯಲ್ಲಿ ಯಾರ್ಯಾರು ಇರಬೇಕು, ಯಾವ್ಯಾವುದು ಯಾರ ಜವಾಬ್ದಾರಿ ಎಂಬ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗಿದೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಲ್ಲಿ 1949 ನೇ ಇಸವಿಯಿಂದ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದೆ. ಈ ಪ್ರಶಸ್ತಿಗೆ ಇದೀಗ 70 ವರ್ಷ ತುಂಬುತ್ತಿದ್ದು, ಈ ಬಾರಿ 70 ಅಥವಾ 100ಕ್ಕೆ ಸಾಧಕರ ಪಟ್ಟಿಯನ್ನು ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.