ಬೆಂಗಳೂರು: 2021-22ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(ಆರ್ಟಿಇ) 2009ರ ಸೆಕ್ಷನ್ 12(1)(ಬಿ) ಹಾಗೂ 12(1)(ಸಿ) ಅಡಿಯಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕಾಗಿ ಅರ್ಹ 11,531 ಅರ್ಜಿಗಳನ್ನು ಮೊದಲ ಸುತ್ತಿನ ಲಾಟರಿಗೆ ಪರಿಗಣಿಸಲಾಗಿದೆ. ಇದರಲ್ಲಿ 394 ಅರ್ಜಿಗಳನ್ನ ತಿರಸ್ಕರಿಸಲಾಗಿದೆ.
ಇಂದು ಮೊದಲನೇ ಸುತ್ತಿನ ಲಾಟರಿಯನ್ನು ಆನ್‌ಲೈನ್ ಮೂಲಕ ನಡೆಸಲಾಗಿದೆ. ಈ ಮೊದಲನೇ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ 4,755 ಅರ್ಹ ಮಕ್ಕಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳ ಪೋಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಸೀಟು ಹಂಚಿಕೆ ಮಾಹಿತಿಯನ್ನು ನೀಡಲಾಗಿದೆ.
ಎಲ್ಲಾ ಪೋಷಕರು ಜೂನ್ 25 ರಿಂದ ಜುಲೈ 09 ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ದಾಖಲಾತಿ ಮಾಡಲು ತಿಳಿಸಿದೆ. ಹಂಚಿಕೆ ವಿವರ ಇಲಾಖಾ ವೆಬ್‌ಸೈಟ್(www.schooleducation.kar.nic.in) ನಲ್ಲಿ ಲಭ್ಯವಿದೆ.