ಬೆಂಗಳೂರು: 2023ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಸದೆ, ಎಲ್ಲಾ ರಾಜಕೀಯ ಪಕ್ಷಗಳಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳನ್ನು ನೇರವಾಗಿ ಆಯ್ಕೆ ಮಾಡಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತು ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ನಿವಾಸಿ ಮುರಳಿ ಕೃಷ್ಣ ಬ್ರಹ್ಮಾನಂದಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಜನಪ್ರತಿನಿಧಿಗಳ ಕಾಯ್ದೆ-1951ರ ಅಡಿಯಲ್ಲಿ ವಿಧಾನಸಭೆ ಚುನಾವಣೆ ನಡೆಸುವ ವಿಚಾರವಾಗಿ ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಕುಂದು ಕೊರತೆ ವ್ಯಕ್ತಪಡಿಸಿದ್ದಾರೆ. ಆದರೆ, ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿಲ್ಲ. ಅರ್ಜಿದಾರರು ಎತ್ತಿರುವ ವಿಚಾರಗಳ ಕುರಿತು ನ್ಯಾಯಾಲಯ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ತಪ್ಪು ಗ್ರಹಿಕೆಯಿಂದ ಅರ್ಜಿ ಸಲ್ಲಿಸಲಾಗಿದ್ದು, ಅದನ್ನು ವಜಾಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ಪೀಠ ತಿಳಿಸಿದೆ.
ಇದನ್ನೂ ಓದಿ: ಪಿಎಸ್‌ಐ ಪರೀಕ್ಷಾ ಹಗರಣ.. ಸಿಐಡಿಯಿಂದ ಪ್ರಿಯಾಂಕ್ ಖರ್ಗೆಗೆ ಮತ್ತೊಂದು ನೋಟಿಸ್
2023ರ ರಾಜ್ಯ ವಿಧಾನಸಭೆ ಚುನಾವಣೆಯನ್ನು ನಡೆಸದೆ ಎಲ್ಲಾ ರಾಜಕೀಯ ಪಕ್ಷಗಳಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳನ್ನು ನೇರವಾಗಿ ಆಯ್ಕೆ ಮಾಡಲು ಚುನಾವಣೆ ನಡೆಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ, ಮುಖ್ಯ ಚುನಾವಣಾ ಆಯುಕ್ತರು, ರಾಜಭವನದ ಕಾರ್ಯದರ್ಶಿಗೆ ನಿರ್ದೇಶಿಸಬೇಕು. ಕರ್ನಾಟಕ ಪ್ರದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದಕ್ಕೆ ಇದು ಅಗತ್ಯ ಕ್ರಮವಾಗಿದೆ ಎಂದು ಅರ್ಜಿದಾರರು ಕೋರಿದ್ದರು.
ಅಲ್ಲದೆ, ಕರ್ನಾಟಕ ಪ್ರದೇಶದ ಆಡಳಿತವನ್ನು ಸೂಕ್ತವಾಗಿ ಪುನರ್ ರಚಿಸಲು ಮಧ್ಯಂತರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲು ಅರ್ಜಿದಾರರನ್ನು ಕೇಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ, ಮುಖ್ಯ ಚುನಾವಣಾ ಆಯುಕ್ತರು, ರಾಜಭವನದ ಕಾರ್ಯದರ್ಶಿ ಮತ್ತು ಎಲ್ಲಾ ರಾಜಕೀಯ ಪಕ್ಷಗಳಿಗೆ ನಿರ್ದೇಶಿಸಬೇಕು. ಇಲ್ಲವಾದರೆ ಕರ್ನಾಟಕ ಪ್ರದೇಶದ ಜನರ ಮತ್ತು ವ್ಯವಹಾರಗಳ ಅಗತ್ಯವನ್ನು ಪೂರೈಸಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಕೋರಿದ್ದರು.