ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಯುವತಿಯನ್ನು ಬಂಧಿಸದಂತೆ ಎಸ್ಐಟಿಗೆ ನಿರ್ದೇಶಿಸಬೇಕು ಎಂದು ಮಾಡಿರುವ ಮನವಿಯನ್ನು ಪುರಸ್ಕರಿಸಲು ಹೈಕೋರ್ಟ್ ನಿರಾಕರಿಸಿದೆ. ತನ್ನನ್ನು ರಾಜಕೀಯವಾಗಿ ಮುಗಿಸಲು ಆರೋಪಿತರು ನಕಲಿ ಸಿಡಿ ಸೃಷ್ಟಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಮೇಶ್ ಜಾರಕಿಹೊಳಿ ಸದಾಶಿವನಗರ ಠಾಣೆಯಲ್ಲಿ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಯುವತಿ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.
ಈ ವೇಳೆ ಯುವತಿ ಪರ ವಕೀಲ ಸಂಕೇತ್ ಏಣಗಿ ವಾದ ಮಂಡಿಸಿ, ರಮೇಶ್ ಜಾರಕಿಹೊಳಿ ದಾಖಲಿಸಿರುವ ದೂರಿನ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಪೊಲೀಸರು ಅರ್ಜಿದಾರ ಯುವತಿಯನ್ನು ಬಂಧಿಸುವ ಸಾಧ್ಯತೆ ಇದೆ. ಇದರಿಂದ ಯುವತಿ ಬಂಧನ ಭೀತಿಯಲ್ಲಿದ್ದಾರೆ. ಇನ್ನು, ಯುವತಿ ನೀಡಿದ ದೂರಿನಡಿ ರಮೇಶ್ ಜಾರಕಿಹೊಳಿ ಬಂಧಿಸಿಲ್ಲ. ಆದ್ದರಿಂದ ಯುವತಿಯನ್ನು ಬಂಧಿಸದಂತೆ ಎಸ್ಐಟಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಯುವತಿ ರಮೇಶ್ ಜಾರಕಿಹೊಳಿ ದಾಖಲಿಸಿರುವ ದೂರು ರದ್ದು ಕೋರಿ ಸಿಆರ್ಪಿಸಿ ಸೆಕ್ಷನ್ 482ರಡಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಈ ಅರ್ಜಿಯಲ್ಲಿ ಯುವತಿಯನ್ನು ಬಂಧಿಸದಂತೆ ಸೂಚಿಸಲು ಸಾಧ್ಯವಿಲ್ಲ. ಅಗತ್ಯವಿದ್ದರೆ ನಿರೀಕ್ಷಣಾ ಜಾಮೀನು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿತು.
ಇದೇ ವೇಳೆ ರಮೇಶ್ ಜಾರಕಿಹೊಳಿ ಪರ ವಕೀಲರು ವಕಾಲತ್ತು ಸಲ್ಲಿಸಲು ಕಾಲಾವಕಾಶ ಕೋರಿದರು. ಎಸ್ಐಟಿ ಪರ ಎಸ್‌ಪಿಪಿ ಪ್ರಸನ್ನಕುಮಾರ್ ಪೀಠಕ್ಕೆ ಮನವಿ ಮಾಡಿದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಭಾಗೀಯ ಪೀಠ ಪಿಐಎಲ್ ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದೆ. ಹೀಗಾಗಿ, ವಿಚಾರಣೆ ಮುಂದೂಡಬೇಕು ಎಂದರು. ಮನವಿ ಪರಿಗಣಿಸಿದ ಪೀಠ, ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿತು.
ಓದಿ: ಕಾಲೇಜುಗಳ ಆರಂಭಕ್ಕೆ ಮುಹೂರ್ತ ಫಿಕ್ಸ್.. ಸಚಿವ ಅಶ್ವತ್ಥ್ ನಾರಾಯಣ್ ಹೇಳಿದ್ದೇನು?