ಬೆಂಗಳೂರು : ನಾದಿನಿಯನ್ನು ಮದುವೆಯಾಗುವುದಕ್ಕಾಗಿ ಪತ್ನಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಕಾರಣವಾಗಿದ್ದ ಪತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ಅಪರಾಧಿ ಮೂರು ವರ್ಷಗಳ ಕಾಲ ಕಠಿಣ ಶಿಕ್ಷೆ ಅನುಭವಿಸುವಂತಾಗಿದೆ.
ತನ್ನ ಪತ್ನಿಯ ಆತ್ಮಹತ್ಯೆಗೆ ಕಾರಣವಾಗಿದ್ದ ಆರೋಪದ ಅಡಿ ಅಧೀನ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಮದರಸಪುರದ ನಿವಾಸಿ ಮೊಹಮ್ಮದ್ ಆಯೂಬ್ ಹೈಕೋರ್ಟನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ನ್ಯಾಯಪೀಠ, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಶಿಕ್ಷೆಯನ್ನು ರದ್ದುಪಡಿಸಲು ನಿರಾಕರಿಸಿದೆ. ಆದರೆ, ಶಿಕ್ಷೆಯ ಪ್ರಮಾಣವನ್ನು ಏಳು ವರ್ಷಗಳಿಂದ ಮೂರು ವರ್ಷಗಳಿಗೆ ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣದ ವಿವರ.. ಅರ್ಜಿದಾರ ಆಯೂಬ್ ಅವರು ರೇಷ್ಮಾ ತಾಜ್ ಅವರನ್ನು 2005ರಲ್ಲಿ ವಿವಾಹವಾಗಿದ್ದರು. ಒಂದು ತಿಂಗಳವರೆಗೂ ಚೆನ್ನಾಗಿಯೇ ಸಂಸಾರ ನಡೆಸಿದ್ದರು. ನಂತರ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಮನೆಯಲ್ಲಿ ಜಗಳವಾಗುತ್ತಿತ್ತು. ಇದಕ್ಕೆ ಕಾರಣ, ಆಯೂಬ್ ರೇಷ್ಮಾ ತಾಜ್‌ನ ಸಹೋದರಿಯನ್ನು ಮದುವೆ ಆಗಬೇಕು ಎಂಬುದು. ಇದೇ ಕಾರಣಕ್ಕೆ ಹೆಂಡತಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದರು. ಜತೆಗೆ, ಮತ್ತೊಂದು ಹುಡುಗಿಯೊಂದಿಗೆ ವಿವಾಹವಾಗಲು ಮುಂದಾಗಿದ್ದರಂತೆ. ಇದರಿಂದ ನೊಂದಿದ್ದ ರೇಷ್ಮಾ ತಾಜ್ 2007ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಘಟನೆ ಸಂಬಂಧ ಮೃತರ ಸಂಬಂಧಿಕರು ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಚಿಂತಾಮಣಿ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ವರದಕ್ಷಿಣೆ ಕಿರುಕುಳ, ಸೇರಿದಂತೆ ಐಪಿಸಿ ವಿವಿಧ ಸೆಕ್ಷನ್‌ಗಳಡಿ ಆಯೂಬ್ಗೆ ಶಿಕ್ಷೆಯನ್ನು ಪ್ರಕಟಿಸಿತ್ತು. ಘಟನೆ ಆತ್ಮಹತ್ಯೆಯಾದರೂ ಪತಿಯ ಕಿರುಕುಳವೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದೆ ಎಂದು ತೀರ್ಪಿನಲ್ಲಿ ವಿವರಿಸಲಾಗಿತ್ತು. ಇದನ್ನು ರದ್ದುಗೊಳಿಸಲು ಕೋರಿ ಆಯೂಬ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ವಿಧಿಸಿದ್ದ ಶಿಕ್ಷೆ ರದ್ದುಪಡಿಸಿದೆ. ಅಲ್ಲದೆ, ಮೃತ ರೇಷ್ಮಾ ತಾಜ್ ಮಸೀದಿಗೆ ಬರೆದಿದ್ದ ಪತ್ರವನ್ನು ಸಾಕ್ಷಿಯನ್ನಾಗಿ ಪರಿಗಣಿಸಿದೆ. ಅಲ್ಲದೆ, ಸೆಕ್ಷನ್ 498ಎ (ವಿವಾಹಿತ ಮಹಿಳೆಗೆ ಕಿರುಕುಳ) ಮತ್ತು 306(ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಶಿಕ್ಷೆ ವಿಧಿಸುತ್ತಿರುವುದಾಗಿ ತಿಳಿಸಿದೆ.
ಮಸೀದಿಯಲ್ಲಿ ರಾಜಿ ಪಂಚಾಯಿತಿ.. ರೇಷ್ಮಾ ತಾಜ್‌ಗೆ ಮದುವೆಯಾದ ಬಳಿಕ ಸಾಕಷ್ಟು ಹಿಂಸೆ ನೀಡಲಾಗುತ್ತಿತ್ತು ಎಂದು ಸ್ಥಳೀಯ ಮಸೀದಿಯೊಂದಕ್ಕೆ ಸಾವಿಗೆ ಮುನ್ನ ಆಕೆ ಪತ್ರದ ಮೂಲಕ ವಿವರಿಸಿದ್ದರು. ಈ ಸಂಬಂಧ ಮಸೀದಿಯ ಮುಖ್ಯಸ್ಥರು ರಾಜಿ ಪಂಚಾಯತಿ ನಡೆಸಿದ್ದು, ಪತ್ನಿಯ ಸಹೋದರಿಯನ್ನು ವಿವಾಹವಾಗಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಅಪರಾಧಿ ಆಯೂಬ್ ಕ್ಷಮೆಯಾಚಿಸಿದ್ದರು. ಇಷ್ಟಾದರೂ ಆತ ತೊಂದರೆ ನೀಡುವುದನ್ನು ಮುಂದುವರೆಸಿದ್ದರು.
ಇದನ್ನೂ ಓದಿ: ಪ್ರತ್ಯೇಕ ಅಪಘಾತ: ಮೈಲಾರ ಮಲ್ಲಣ್ಣ ದರ್ಶನದಿಂದ ವಾಪಸ್ಸಾಗುತ್ತಿದ್ದ ಇಬ್ಬರು ಯುವಕರು ಸೇರಿ ಮೂವರ ಸಾವು