ಬೆಂಗಳೂರು: ಸಿಎಂ ಬಿಎಸ್ವೈಗೆ ಇದೀಗ ಮತ್ತೊಂದು ಜಿಲ್ಲಾ ರಚನೆಯ ಟೆನ್ಷನ್ ಶುರುವಾಗಿದೆ. ಬಳ್ಳಾರಿಯ ಹರಪನಹಳ್ಳಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಅಂತ ಸಿಎಂ ಯಡಿಯೂರಪ್ಪ ಅವರಿಗೆ ಶಾಸಕ ಕರುಣಾಕರ್ ರೆಡ್ಡಿ ನೇತೃತ್ವದ ನಿಯೋಗ ಮನವಿ ಮಾಡಿದೆ.
ಆ ಮೂಲಕ ಆನಂದ್ ಸಿಂಗ್ಗೆ ತಿರುಗೇಟು ನೀಡಲು ಕರುಣಾಕರ ರೆಡ್ಡಿ ಮುಂದಾಗಿದ್ದಾರೆ. ಆನಂದ್ ಸಿಂಗ್ ಈಗಾಗಲೇ ವಿಜಯನಗರ ಜಿಲ್ಲೆ ರಚಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪ್ರತಿಯಾಗಿ ಶಾಸಕ ಕರುಣಾಕರ ರೆಡ್ಡಿ ಹರಪನಹಳ್ಳಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಶಾಸಕ ಕರುಣಾಕರ್ ರೆಡ್ಡಿ ನೇತೃತ್ವದಲ್ಲಿ ಹರಪನಹಳ್ಳಿ ಕ್ಷೇತ್ರದ 30ಕ್ಕೂ ಅಧಿಕ ಜನರು ವಿಧಾನಸೌಧದಲ್ಲಿ ಇಂದು ಸಿಎಂ ಅವರನ್ನು ಭೇಟಿ ಮಾಡಿ, ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ರಚಿಸಬೇಕು ಅಂತ ಮನವಿ ಮಾಡಿದರು.
ಈಗಾಗಲೇ ಸಚಿವ ಆನಂದ್ ಸಿಂಗ್ ವಿಜಯನಗರ ಜಿಲ್ಲೆಯಾಗಬೇಕೆಂದು ಮನವಿ ಮಾಡಿದ್ದಾರೆ. ಈ ಸಂಬಂಧ ಮೊದಲ ಹಂತದ ಸಭೆಯನ್ನೂ ನಡೆಸಲಾಗಿತ್ತು. ಬಳಿಕ ಹೆಚ್. ವಿಶ್ವನಾಥ್ ಹುಣಸೂರು ಜಿಲ್ಲೆಯಾಗಬೇಕು ಎಂದು ಒತ್ತಾಯಿಸಿದ್ದರು. ಇದೀಗ ಕರುಣಾಕರ ರೆಡ್ಡಿ ಹರಪನಹಳ್ಳಿಯನ್ನು ಜಿಲ್ಲೆಯನ್ನಾಗಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.