ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಪ್ರವಾಹವಾಗಿದೆ. ಮಳೆಯ ಅವಾಂತರದಿಂದಾಗಿ ಸಾಕಷ್ಟು ಪ್ರಾಣ ಹಾನಿ ಹಾಗೂ ಆಸ್ತಿ ಹಾನಿ ಕೂಡ ಆಗಿದೆ. ಕೊರೊನಾ ಜೊತೆಗೀಗ ಮಳೆ ಅವಾಂತರ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದೆ. ಹಾಗಾಗಿ ಕೆಓಎಸ್ 10ನೇ ತರಗತಿ ಪರೀಕ್ಷೆ ಮುಂದೂಡುವಂತೆ ಮನವಿ ಸಲ್ಲಿಸಲಾಗಿದೆ.
ಹೌದು, ರಾಜ್ಯದ ಹಲವೆಡೆ ಪ್ರವಾಹ ಹಿನ್ನೆಲೆ ಕೆಓಎಸ್ 10ನೇ ತರಗತಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಕರ್ನಾಟಕ ಓಪನ್ ಸ್ಕೂಲ್ ಭಾರತಿ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಪರೀಕ್ಷೆ ಮುಂದೂಡುವಂತೆ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ನಾಳೆಯಿಂದ ರಾಜ್ಯಾದ್ಯಂತ ಖಾಸಗಿ ವಿದ್ಯಾರ್ಥಿಗಳ ಕೆಓಎಸ್ 10ನೇ ತರಗತಿ ಪರೀಕ್ಷೆ ಆರಂಭವಾಗುತ್ತಿದೆ. 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅದ್ರಲ್ಲೂ ಮಳೆ ಹೆಚ್ಚಾಗಿರುವ ಉತ್ತರ ಕರ್ನಾಟಕ ಭಾಗದಲ್ಲೇ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಇದನ್ನೂ ಓದಿ: ಹಿರಣ್ಯಕೇಶಿ ನದಿ ಪ್ರವಾಹ ಅವಾಂತರ: ಸಂತ್ರಸ್ತರಿಗೆ ಸಾಂತ್ವನ ಹೇಳಿದ ಸಿಎಂ ಬಿಎಸ್‌ವೈ
ಪ್ರವಾಹ, ಮಳೆ ಇದ್ದ ಕಾರಣ ಪರೀಕ್ಷೆಗೆ ಇನ್ನೂ ಯಾರೂ ಸಹ ಹಾಲ್ ಟಿಕೆಟ್ ಪಡೆದಿಲ್ಲ. ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಬಸ್ ಸಂಚಾರವಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಆರಂಭವಾಗುವ ಪರೀಕ್ಷೆಗೆ ಹಾಜರಾಗುವುದು ಕಷ್ಟವಾಗಿದೆ. ಶಿಕ್ಷಣ ಸಚಿವರು ತಕ್ಷಣ ಈ ಬಗ್ಗೆ ಗಮನ ಹರಿಸಿ ಪರೀಕ್ಷೆ ಮುಂದೂಡಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಕೆಓಎಸ್ ಮನವಿ ಮಾಡಿದೆ.