ಬೆಂಗಳೂರು: ರಾಜಧಾನಿಯ ಅಪೊಲೊ ಫಾರ್ಮಸಿ ಹಾಗೂ ಮೆಡ್ ಪ್ಲಸ್ ಔಷಧ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಹಾಡಹಾಗಲೇ ಔಷಧ ಖರೀದಿ ನೆಪದಲ್ಲಿ ಚಾಕು ತೋರಿಸಿ ದೋಚುತ್ತಿದ್ದ ದರೋಡೆಕೋರನನ್ನು ವಿದ್ಯಾರಣಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅ.8ರಂದು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಬರುವ ಅಪೊಲೊ ಫಾರ್ಮಸಿಯಲ್ಲಿ ಬಿಲ್ಲಿಂಗ್ ಮಾಡುತ್ತಿದ್ದ ಹರಿಕುಮಾರ್ ಎಂಬವನಿಗೆ ಚಾಕು ತೋರಿಸಿ ಬೆದರಿಸಿ ಅಂಗಡಿಯಲ್ಲಿ ಆರೋಪಿ ದರೋಡೆ ಮಾಡಿದ್ದಾನೆ. ಫಾರ್ಮಸಿ ಮಾಲೀಕ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಜೆ.ಸಿ.ನಗರ ನಿವಾಸಿ ಆರೋಪಿ ಸಮಿವುದ್ದೀನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿ ದರೋಡೆ ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ. ಡೆಲಿವರಿ ಕಂಪೆನಿಯೊಂದರಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದನು. ಕಳೆದೊಂದು ವರ್ಷದಿಂದ ಕೆಲಸಕ್ಕೆ ಹೋಗದೆ ಓಡಾಡುತ್ತಿದ್ದನು. ಸುಲಭವಾಗಿ ಹಣ ಸಂಪಾದನೆ ಮಾಡಲು ಅಪರಾಧ ಕೃತ್ಯ ಎಸಗುವುದನ್ನು ಕರಗತ ಮಾಡಿಕೊಂಡಿದ್ದ.
ಹೀಗಾಗಿ ಅಪೊಲೊ ಹಾಗೂ ಮೆಡ್ ಪ್ಲಸ್ ಅಂಗಡಿಗಳಿಗೆ ಹಾಕಲಾದ ಪ್ರವೇಶದ್ವಾರದ ಗ್ಲಾಸ್ಗಳನ್ನು ಕಂಡು ಇಲ್ಲಿ ದರೋಡೆ ಮಾಡಿದರೆ ಸುಲಭವಾಗಲಿದೆ ಎಂದು ಭಾವಿಸಿ ಔಷಧಿ ಕೇಳುವ ಸೋಗಿನಲ್ಲಿ ತೆರಳಿ ಚಾಕು ತೋರಿಸಿ ಬೆದರಿಸಿ ಹಣ ದೋಚುತ್ತಿದ್ದನು. ವಿದ್ಯಾರಣ್ಯಪುರ, ಸಂಪಿಗೆಹಳ್ಳಿ, ಕೆಂಗೇರಿ, ಬೆಳ್ಳಂದೂರು, ಹೆಚ್.ಎಸ್.ಆರ್.ಲೇಔಟ್, ಹುಳಿಮಾವು, ಕೊತ್ತನೂರು, ನಗರದ ಹೊರವಲಯಗಳಾದ ಹೆಬ್ಬಗೋಡಿ ಹಾಗೂ ಸರ್ಜಾಪುರ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ದನು. ದರೋಡೆಕೋರನ ವಿರುದ್ಧ ಒಟ್ಟು 13 ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಆರೋಪಿ ಬಂಧನ: ಪಾಸ್ತಾ ತಯಾರಿಸುವ ಮಷಿನ್ ಒಳಗೆ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಕೇರಳ ಮೂಲದ ಪ್ರಯಾಣಿಕನೊಬ್ಬನನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಇಂಡಿಗೋ ವಿಮಾನದಲ್ಲಿ ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈತ ಬಂದಿಳಿದಿದ್ದ. ಈ ಪ್ರಯಾಣಿಕನ ಮೇಲೆ ಸಂಶಯವಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಮರೆಮಾಚಿ ಚಿನ್ನ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಪಾಸ್ತಾ ತಯಾರಿಸುವ ಯಂತ್ರದೊಳಗೆ ಚಿನ್ನದ ರಾಡ್ಗಳನ್ನು ಅಡಗಿಸಿ ಅಕ್ರಮ ಸಾಗಾಣಿಕೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕಾಸರಗೋಡಿನ 41 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ 598 ಗ್ರಾಂ ತೂಕದ 35.38 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂಓದಿ: ಬೆಂಗಳೂರು: ಬಂಧಿಸಲು ಹೋದ ಹೆಡ್ಕಾನ್ಸ್ಟೆಬಲ್ಗೆ ಚಾಕು ಇರಿತ, ಆರೋಪಿ ಬಂಧನ