ಬೆಂಗಳೂರು: ಬಿಜೆಪಿ ಸರ್ಕಾರದ ವೇಳೆ ತಿದ್ದುಪಡಿ ಮಾಡಲಾಗಿದ್ದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ವಿಧೇಯಕಕ್ಕೆ ಮೊದಲಿದ್ದ ರೂಪ ನೀಡಿ ಮರು ತಿದ್ದುಪಡಿ ಮಾಡಿ ವಿಧೇಯಕವನ್ನು ವಿಧಾನ ಪರಿಷತ್ನಲ್ಲಿ ಮಂಡಿಸಲಾಯಿತು.
ವಿಧಾನ ಪರಿಷತ್ ಕಾನೂನು ರಚನಾ ಅವಧಿಯಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕವನ್ನು ಸಹಕಾರ ಸಚಿವ ಶಿವಾನಂದ ಪಾಟೀಲ್ ಮಂಡಿಸಿದರು. ಎಪಿಎಂಸಿ ಬಿಲ್ ಈ ಹಿಂದೆಯೇ ಇತ್ತು. ಆದರೆ ಹಿಂದಿನ ಸರ್ಕಾರ ತಿದ್ದುಪಡಿ ತಂದಿತ್ತು. ಈಗ ಕೃಷಿಕರ ಅಪೇಕ್ಷೆಯಂತೆ 2019ರ ಮೊದಲು ಹೇಗಿತ್ತೋ ಆ ರೀತಿ ಮರು ಜಾರಿ ಮಾಡುವ ತಿದ್ದುಪಡಿ ಮಾಡಲಾಗುತ್ತಿದೆ. ನಾವು ಪ್ರಣಾಳಿಕೆಯಲ್ಲಿಯೂ ಹೇಳಿದ್ದೆವು. ಅದರಂತೆ ತಿದ್ದುಪಡಿ ತಂದಿದ್ದೇವೆ ಎಂದರು.
ಎಪಿಎಂಸಿಗಳು ಅಸ್ತಿತ್ವ ಕಳೆದುಕೊಳ್ಳುವ ಆತಂಕ ಮತ್ತು ಕೇಂದ್ರ ಯಾವ ಉದ್ದೇಶದಿಂದ ಜಾರಿಗೆ ತಂದಿತ್ತೋ ಆ ಉದ್ದೇಶ ಈಡೇರಿಲ್ಲ. ಇದು ಕೇಂದ್ರಕ್ಕೂ ಗೊತ್ತಾಗಿದೆ. ಹಾಗಾಗಿ ಕೇಂದ್ರ ಸರ್ಕಾರವೇ ಮಸೂದೆ ವಾಪಸ್ ಪಡೆದಿದೆ. ಈಗ ಕೇವಲ ನಾಲ್ಕು ರಾಜ್ಯದಲ್ಲಿ ಮಾತ್ರ ಇದೆ. ಹಾಗಾಗಿ ಈ ಕಾಯ್ದೆ ಮರು ಜಾರಿಗೆ ಸದನದ ಸದಸ್ಯರು ಸಹಮತ ನೀಡುವಂತೆ ಮನವಿ ಮಾಡಿದರು.
ವಿಧೇಯಕದ ಮೇಲೆ ಚರ್ಚೆಗೆ ಸಾಕಷ್ಟು ಸದಸ್ಯರು ಹೆಸರು ನೀಡಿದ್ದು, ಮಧ್ಯಾಹ್ನದ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿ ಉಪಸಭಾಪತಿ ಪ್ರಾಣೇಶ್ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದರು.
ಇದನ್ನೂ ಓದಿ: ಬಿಜೆಪಿ ಸರ್ಕಾರ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್: ಸಚಿವ ಶಿವಾನಂದ ಪಾಟೀಲ್
ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ವಿವಾದಿತ ಎಪಿಎಂಸಿ ಕಾಯ್ದೆ ಹಿಂಪಡೆಯುವ ತಿದ್ದುಪಡಿ ವಿಧೇಯಕ ನಿನ್ನೆ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿದೆ. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಪ್ರತಿಭಟನೆ ಮಧ್ಯೆ ವಿಧಾನಸಭೆಯಲ್ಲಿ 2023ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿತ್ತು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯನವರೇ ಪರಿಶೀಲನೆ ಪದ ಕೈಬಿಟ್ಟು, ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ: ಕೋಡಿಹಳ್ಳಿ ಚಂದ್ರಶೇಖರ್
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧೇಯಕವನ್ನು ಮಂಡಿಸಿದ್ದರು. ಈ ಬಿಲ್ನ್ನು ತರಾತುರಿಯಲ್ಲಿ ತಂದಿಲ್ಲ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಕಾನೂನು ತಂದಿತ್ತು. ಇದರಿಂದ ರೈತರಿಗೆ ಲಾಭ ಆಗಿಲ್ಲ. ಇದರಿಂದ ರಿಲಯನ್ಸ್, ಡಿಮಾರ್ಟ್ ನಂತವರಿಗೆ ಲಾಭ ಆಗಿದೆ. ರೈತರ ಪ್ರತಿಭಟನೆ ಹಿನ್ನೆಲೆ ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಹೀಗಿದ್ದರೂ, ರಾಜ್ಯದಲ್ಲಿ ಈ ಕಾನೂನು ಹಿಂಪಡೆದಿರಲಿಲ್ಲ. ಕೇಂದ್ರ ವಾಪಸ್ ಪಡೆದರೂ ರಾಜ್ಯ ವಾಪಸ್ ಪಡೆದಿಲ್ಲ. ಇದರಿಂದ ರೈತರಿಗೆ ತೊಂದರೆ ಆಗುತ್ತಿತ್ತು. ಈ ಕಾರಣಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗಿದೆ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯ ಎಪಿಎಂಸಿ ಕಾಯ್ದೆ ಹಿಂಪಡೆಯುವ ತಿದ್ದುಪಡಿ ವಿಧೇಯಕ ಅಂಗೀಕಾರ: ಬಿಜೆಪಿ, ಜೆಡಿಎಸ್ ವಿರೋಧ