ಬೆಂಗಳೂರು: ರಾಜ್ಯ ವಕ್ಫ್ ಬೋರ್ಡ್‌ನ 2.5 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ ಅವ್ಯವಹಾರ ಕುರಿತ ಅನ್ವರ್ ಮಾಣಿಪ್ಪಾಡಿ ಆಯೋಗದ ಪೂರ್ಣ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಜೊತೆಗೆ ಈ ಕುರಿತು ಉಪ ಲೋಕಾಯುಕ್ತರು ನೀಡಿರುವ ವರದಿ ಆಧಾರದ ಮೇಲೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಬಿಜೆಪಿ ಸದಸ್ಯರಾದ ಕೆ. ರಘುಪತಿ ಭಟ್, ಬಸನಗೌಡ ಪಾಟಿಲ್ ಯತ್ನಾಳ್ ಹಾಗೂ ಸಂಜೀವ ಮಠಂದೂರು, 2.5 ಲಕ್ಷ ಕೋಟಿ ರೂ. ಮೌಲ್ಯದ 29 ಸಾವಿರ ಎಕರೆ ಜಮೀನನ್ನು ದೊಡ್ಡ ದೊಡ್ಡ ಕಳ್ಳರು ಕಬಳಿಸಿದ್ದಾರೆ. ಕೂಡಲೇ ವರದಿಯನ್ನು ಸದನದಲ್ಲಿ ಮಂಡಿಸಿ ಚರ್ಚೆಗೆ ಅವಕಾಶ ನೀಡಬೇಕು. ಜತೆಗೆ ಸಿಬಿಐ ತನಿಖೆಗೆ ವಹಿಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಸ್ವಾಗತಿಸುತ್ತಲೇ ಕುಟುಕಿದ ಕಾಂಗ್ರೆಸ್‌ನ ಯುಟಿ ಖಾದರ್, ಅಲ್ಪಸಂಖ್ಯಾತರ ಮೇಲೆ ನಿಮಗಿರುವ ಕಾಳಜಿಗೆ ಅಭಿನಂದನೆ. ರಘುಪತಿ ಭಟ್ ಸೇರಿದಂತೆ ಯಾರೂ ಹಿಂದೂಗಳ ಸಮಸ್ಯೆಗಳ ಬಗ್ಗೆಯಾಗಲಿ, ಮೀನುಗಾರರ ಸಮಸ್ಯೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸ್ಮಾರ್ಟ್ ಸಿಟಿ ಬಗ್ಗೆ ಚರ್ಚೆ ಮಾಡಿಲ್ಲ. ಎರಡೂ ವರ್ಷದಿಂದ ಈ ವಿಚಾರ ಪ್ರಸ್ತಾಪಿಸದೇ ಈಗ 40 ಪರ್ಸೆಂಟ್ ಕಮಿಷನ್ ವಿಚಾರದಿಂದ ತಪ್ಪಿಸಿಕೊಳ್ಳಲು ಈ ವಿಚಾರ ತಂದಿದ್ದೀರಿ ಎಂದು ಟೀಕಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ನಿಮ್ಮ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಆಸ್ತಿ ರಕ್ಷಣೆಗೆ ಯತ್ನಿಸದೇ ವರದಿ ತಿರಸ್ಕರಿಸಿದಾಗ ನೀವು ಯಾಕೆ ಮಾತನಾಡಲಿಲ್ಲ ಎಂದು ಬಿಜೆಪಿ ಸದಸ್ಯರು ಯುಟಿ ಖಾದರ್ ಅವರನ್ನು ಪ್ರಶ್ನಿಸಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.
ನಂತರ ಮಾತನಾಡಿದ ಸಿಎಂ, 40 ಪರ್ಸೆಂಟ್ ಕಮಿಷನ್ ವಿಚಾರದ ಬಗ್ಗೆಯೂ ಮಾತನಾಡುತ್ತೇವೆ. ಅದರಲ್ಲಿ ಯಾರ‍್ಯಾರ ಹೆಸರು ಬರುತ್ತದೆ ಎಂಬುದು ನಿಮಗೂ ಗೊತ್ತಾಗಲಿದೆ. ಅದಕ್ಕೂ ನೀವೇ ಉತ್ತರ ಕೊಡಬೇಕಾಗುತ್ತದೆ. ಅದು ಭ್ರಷ್ಟಾಚಾರವಾದರೆ ಪವಿತ್ರವಾದ ಸರ್ಕಾರಿ ವಕ್ಫ್ ಆಸ್ತಿ ಕಬಳಿಕೆಯೂ ಭ್ರಷ್ಟಾಚಾರ ಎಂಬುದು ತಿಳಿದಿರಲಿ. 2.5 ಲಕ್ಷ ಕೋಟಿ ರೂ. ಆಸ್ತಿ ದೊಡ್ಡ ದೊಡ್ಡ ಭ್ರಷ್ಟರ ಪಾಲಾಗಿದೆ. ಈ ಬಗ್ಗೆ ವರದಿಯನ್ನು ಸದನದಲ್ಲಿ ಮಂಡಿಸಿ ಪ್ರತಿಯೊಬ್ಬ ಸದಸ್ಯರಿಗೂ ಪ್ರತಿ ನೀಡುತ್ತೇವೆ. ಜತೆಗೆ ಈ ಕುರಿತ ಉಪ ಲೋಕಾಯುಕ್ತ ವರದಿ ಆಧರಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ವಕ್ಫ್ ಬೋರ್ಡ್ ರದ್ದುಗೊಳಿಸಿ ಸಿಬಿಐ ತನಿಖೆಗೆ ನೀಡಿ: ಬಿಜೆಪಿಯ ಬಸನಗೌಡ ಪಾಟಿಲ್ ಯತ್ನಾಳ್ ಮಾತನಾಡಿ, ವಕ್ಫ್ ಬೋರ್ಡ್‌ನಲ್ಲಿ ದೊಡ್ಡ ದೊಡ್ಡ ದೇಶದ್ರೋಹಿಗಳು ಸರ್ಕಾರದ ಜಮೀನು ಕಬಳಿಸಿದ್ದಾರೆ. ಕೂಡಲೇ ವಕ್ಫ್ ಬೋರ್ಡ್ ರದ್ದುಪಡಿಸಿ, ಎಲ್ಲ ವಕ್ಫ್ ಆಸ್ತಿಯನ್ನೂ ಕಂದಾಯ ಇಲಾಖೆ ವಶಕ್ಕೆ ಪಡೆಯಬೇಕು. ವಕ್ಫ್ ಆಸ್ತಿಯಲ್ಲಿ ಮಸೀದಿಯಿದ್ದರೆ, ಅಷ್ಟು ಜಾಗ ಮಾತ್ರ ಅವರಿಗೆ ಬಿಟ್ಟುಕೊಡಬೇಕು. ಜೊತೆಗೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಎರಡು ಬಾರಿ ಸಚಿವ ಸಂಪುಟ ವರದಿಯನ್ನು ತಿರಸ್ಕರಿಸಿತ್ತು. ಆದರೆ, ಹೈಕೋರ್ಟ್ ಸದನದಲ್ಲಿ ಮಂಡಿಸುವಂತೆ ಆದೇಶಿಸಿದ್ದರಿಂದ 2020ರ ಸೆ.29 ರಂದು ವಿಧಾನಸಭೆಯಲ್ಲಿ ಹಾಗೂ 2020ರ ಸೆ. 25 ರಂದು ವಿಧಾನಪರಿಷತ್‌ನಲ್ಲಿ ವರದಿ ಮಂಡಿಸಲಾಗಿದೆ ಎಂದರು.
ಆದರೆ, ಸಂಪೂರ್ಣ ವರದಿ ಮಂಡಿಸಿಲ್ಲ, ಆಯ್ದ ಭಾಗವನ್ನು ಮಂಡಿಸಿದ್ದೀರಿ ಎಂಬ ತಕರಾರಿನ ಹಿನ್ನೆಲೆಯಲ್ಲಿ ಈವರೆಗೆ ಸದನದಲ್ಲಿ ಚರ್ಚೆ ನಡೆದಿಲ್ಲ. ಈಗ ಚರ್ಚೆ ಮಾಡಲು ಸರ್ಕಾರ ಸಿದ್ದವಿದೆ. ಜೊತೆಗೆ ಉಪ ಲೋಕಾಯುಕ್ತ ವರದಿ, ಕೋರ್ಟ್ ಆದೇಶದ ಪ್ರಕಾರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲೂ ಸಿದ್ಧವಿದೆ. ಈ ವಿಚಾರದಲ್ಲಿ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದರು. ಇದಕ್ಕೂ ಮೊದಲು ಮಾತನಾಡಿದ್ದ ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳಿಗೆ ಬಿಡುವುದಾಗಿ ತಿಳಿಸಿದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಕಮಿಷನ್ ಆರೋಪದ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ: ಚರ್ಚೆಗೆ ಸರ್ಕಾರ ಸಿದ್ಧ ಎಂದ ಸಿಎಂ ಬೊಮ್ಮಾಯಿ