ಬೆಂಗಳೂರು: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಸಿರುವ ಹೈಕೋರ್ಟ್ ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ಜಿ.ಆರ್ ಮೋಹನ್ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಯಾದ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿತು. ಅಲ್ಲದೇ, ಇದೇ ವಿಷಯವಾಗಿ ಸಲ್ಲಿಕೆಯಾಗಿರುವ ಮತ್ತೊಂದು ಅರ್ಜಿಯೊಂದಿಗೆ ಇದನ್ನೂ ವಿಚಾರಣೆ ನಡೆಸುವುದಾಗಿ ತಿಳಿಸಿ, ಕಲಾಪವನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿತು.
ಪಿಐಎಲ್ ಸಾರಾಂಶ:
ಸರ್ಕಾರ ಜಾರಿಗೊಳಿಸಿರುವ ತಿದ್ದುಪಡಿ ನಿಯಮಗಳು ಭೂಸುಧಾರಣಾ ಕಾಯ್ದೆಯ ಮೂಲ ಉದ್ದೇಶಗಳಿಗೆ ವಿರುದ್ಧವಾಗಿದೆ. ಕೋವಿಡ್-19 ಸಂದರ್ಭದಲ್ಲಿ ಕಾಯ್ದೆಯಲ್ಲಿನ ಪ್ರಮುಖ ಸೆಕ್ಷನ್ಗಳಾದ 79(ಎ), 79(ಬಿ) ಹಾಗೂ 79(ಸಿ) ತೆಗೆದುಹಾಕಿ ತಿದ್ದುಪಡಿ ಮಾಡಲಾಗಿದೆ. ಭೂ ಒಡೆತನ, ಖರೀದಿ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಹಿಂದಿನ ಕಾಯ್ದೆಯಲ್ಲಿದ್ದ ಮಿತಿ ಹಾಗೂ ನಿಬಂಧನೆಗಳನ್ನು ಕೈ ಬಿಟ್ಟು ಅಧ್ಯಾದೇಶ ಹೊರಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅಲ್ಲದೇ, ತಿದ್ದುಪಡಿ ನಿಯಮಗಳು ಭೂಮಾಫಿಯಾವನ್ನು ಉತ್ತೇಜಿಸಲು ಪೂರಕವಾಗಿವೆ. ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ಅಧ್ಯಾದೇಶ ಹೊರಡಿಸಲಾಗಿದೆ. ಕೊರೊನಾದಿಂದ ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ರೈತರು, ತಮ್ಮ ಭೂಮಿ ಮಾರಾಟ ಮಾಡಲು ಮುಂದಾಗಬಹುದು. ಇದರಿಂದ ಕೃಷಿ ಭೂಮಿ ಶ್ರೀಮಂತರ ಪಾಲಾಗಲಿದೆ. ಹಾಗಾದಲ್ಲಿ ರಾಜ್ಯಾದ್ಯಂತ ಆಹಾರ ಧಾನ್ಯಗಳ ಕೊರತೆಯುಂಟಾಗುವ ಸಾಧ್ಯತೆಯಿದೆ. ಆದ್ದರಿಂದ, ಸರ್ಕಾರದ ಅಧ್ಯಾದೇಶ ರದ್ದುಪಡಿಸಬೇಕು ಮತ್ತು ಪಿಐಎಲ್ ಇತ್ಯರ್ಥವಾಗುವವರೆಗೆ ಅಧ್ಯಾದೇಶ ಜಾರಿಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.