ಬೆಂಗಳೂರು: ರಾಜ್ಯದ ಕೆಲ ಶಾಸಕರ ಹನಿಟ್ರ್ಯಾಪ್ ಪ್ರಕರಣದ ಬೆನ್ನತ್ತಿರುವ ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಾಗೀಶ್ ಬಂಧಿತ ಆರೋಪಿ. ಸದ್ಯ ಪ್ರಕರಣದಲ್ಲಿ ಒಟ್ಟು ಆರೋಪಿಗಳ ಸಂಖ್ಯೆ 6 ಕ್ಕೇರಿದೆ.
ಶಾಸಕರ ಹನಿಟ್ರ್ಯಾಪ್ ಪ್ರಕರಣದಲ್ಲಿ ಈಗಾಗ್ಲೇ ಬಂಧಿತನಾಗಿರುವ ಕಿಂಗ್ ಪಿನ್ ರಾಘವೇಂದ್ರ ಜೊತೆ ಸೇರಿಕೊಂಡು ವಾಗೀಶ್ ಹುಡುಗಿಯರನ್ನ ಮುಂದೆ ಬಿಟ್ಟು ಹನಿಟ್ರ್ಯಾಪ್ ನಡೆಸುತ್ತಿದ್ದ. ನಂತರ ಹುಡುಗಿಯರು ಹಾಗೂ ಶಾಸಕರು ಜೊತೆಗಿರುವ ದೃಶ್ಯಗಳನ್ನ ಶಾಸಕರಿಗೆ ಕಳುಹಿಸಿ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಸದ್ಯ ಈ ಕಾರಣಕ್ಕೆ ವಾಗೀಶ್ನನ್ನ ಬಂಧಿಸಿರುವ ಸಿಸಿಬಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ.
ಮತ್ತೊಂದೆಡೆ ಸಿಸಿಬಿ ಅಧಿಕಾರಿಗಳು ಇಲ್ಲಿಯವರೆಗೆ ನಡೆಸಿದ ತನಿಖೆಯ ಮಾಹಿತಿ ಕುರಿತಂತೆ ನ್ಯಾಯಾಲಯಕ್ಕೆ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದ್ದಾರೆ. ಇಲ್ಲಿಯವರೆಗೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಕೇವಲ ಓರ್ವ ಶಾಸಕ ಮಾತ್ರ ದೂರು ನಿಡಿದ್ದಾರೆ. ಆದರೆ ಆರೋಪಿಗಳನ್ನು ತನಿಖೆ ನಡೆಸಿದಾಗ, ಹಲವು ಶಾಸಕರ ಹನಿಟ್ರ್ಯಾಪ್ ವಿಡಿಯೋಗಳು ಸಿಕ್ಕಿವೆ. ಉಳಿದ ಶಾಸಕರ ವಿಡಿಯೋ ಸಂಬಂಧ ಯಾವುದೇ ಪ್ರತ್ಯೇಕ ದೂರು ನೀಡದ ಹಿನ್ನೆಲೆ ತನಿಖೆಯಲ್ಲಿ ಸಿಕ್ಕಿರುವ ಶಾಸಕರ ವಿಡಿಯೋ ದಾಖಲೆಗಳನ್ನು ಚಾರ್ಜ್ ಶೀಟ್ನಲ್ಲಿ ಸೇರಿಸಲು ಸಿಸಿಬಿ ತಂಡ ತೀರ್ಮಾನಿಸಿದೆ.
ಈಗಾಗಲೇ ಹನಿಟ್ರ್ಯಾಪ್ಗೆ ಒಳಗಾದ ಶಾಸಕ ಹಾಗೂ ಆರೋಪಿಗಳ ವಿಡಿಯೋ ದಾಖಲೆ ಆಧರಿಸಿ ತನಿಖಾಧಿಕಾರಿಗಳು ಕೆಲವೇ ದಿನಗಳಲ್ಲಿ ಕೋರ್ಟ್ ಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸದ್ದಾರೆ ಎಂದು ತಿಳಿದುಬಂದಿದೆ.