ಬೆಂಗಳೂರು: ಬಜೆಟ್ ಮಂಡನೆ ವೇಳೆ ಅನಾಮಿಕ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಯನ್ನು ಯಾಮಾರಿಸಿ ಸದನದ ಒಳಗೆ ಪ್ರವೇಶಿಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ವಿಧಾನಸಭೆ ಪ್ರವೇಶಿಸಿದ್ದಾನೆ. ಈ ವ್ಯಕ್ತಿಯನ್ನು ಮೊಳಕಾಲ್ಮೂರು ಕ್ಷೇತ್ರದ ನಿವಾಸಿ ತಿಪ್ಪೇರುದ್ರಪ್ಪ (70) ಎಂದು ಗುರುತಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಜೆಟ್ ಮಂಡನೆ ಸಂದರ್ಭದಲ್ಲಿ ಸುಮಾರು 15 ನಿಮಿಷಗಳ ಜಾಲ ದೇವದುರ್ಗ ಕ್ಷೇತ್ರದ ಜೆಡಿಎಸ್ ಶಾಸಕಿ ಕರೆಯಮ್ಮ ಆಸನದಲ್ಲಿ ಕುಳಿತಿದ್ದಾನೆ. ಇದನ್ನು ಗಮನಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರಿಗೆ ಆ ವ್ಯಕ್ತಿ ಬಗ್ಗೆ ಅನುಮಾನ ಬಂದಿದೆ. ಕೂಡಲೇ ಅವರು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಗಮನಕ್ಕೆ ತಂದಿದ್ದಾರೆ. ಆದರೆ, ಅಷ್ಟರೊಳಗೆ ಮಾರ್ಷಲ್ಗಳು ಆತನನ್ನು ಹೊರಗೆ ಕರೆತಂದಿದ್ದಾರೆ.
ಈ ಬಗ್ಗೆ ನಗರ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಮಾತನಾಡಿದ್ದು 'ಸಂದರ್ಶಕರ ಎಂಟ್ರಿ ಪಾಸ್ ಪಡೆದಿದ್ದ ತಿಪ್ಪೇರುದ್ರಪ್ಪ ಮೂಲತಃ ವಕೀಲರಾಗಿದ್ದು ಸ್ವಲ್ಪ ಮಾನಸಿಕ ಸಮಸ್ಯೆ ಎದುರಿಸುರುವ ಬಗ್ಗೆ ಶಂಕೆಯಿದೆ. ವಿಧಾನಸಭೆ ಪ್ರವೇಶದ್ವಾರದ ಬಳಿ ಶಾಸಕ ಎಂದು ಹೇಳಿ ಒಳ ಬಂದಿದ್ದಾರೆ. ನಂತರ ಶಾಸಕ ಎಂದು ಮಾರ್ಷಲ್ ಗೆ ಹೇಳಿ ಒಳಗೆ ಹೋಗಿದ್ದಾನೆ. ಹೊಸ ಎಂಎಲ್ ಎ ಎಂದು ಮಾರ್ಷಲ್ ಗಳು ಒಳಗೆ ಬಿಟ್ಟಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಬಜೆಟ್ ಸೆಷನ್ ಹಿನ್ನೆಲೆ ಬಂದಿದ್ದಾಗಿ ಹೇಳಿಕೆ ನೀಡಿದ್ದಾನೆ. ಹೀಗಾಗಿ ವಿಧಾನಸಭೆ ಅತಿಕ್ರಮಣ ಪ್ರವೇಶ, ಶಾಸಕರ ಸ್ಥಾನದ ದುರ್ಬಳಕೆ ಆರೋಪದ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ವ್ಯಕ್ತಿ ಏಕೆ ಬಂದಿದ್ದ? ಇಷ್ಟೊಂದು ಭದ್ರತೆ ನಡುವೆಯೂ ಆ ವ್ಯಕ್ತಿ ಹೇಗೆ ಸದನದೊಳಗೆ ಪ್ರವೇಶಿಸಿದ್ದ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿವೆ. ವಿಧಾನಸಭೆ ಒಳಗೆ ಪ್ರವೇಶಿಸಬೇಕಾದರೆ, ಎರಡು ಬಾಗಿಲನ್ನು ದಾಟಬೇಕು. ಎರಡೂ ಕಡೆ ತಪಾಸಣೆ ಮಾಡಲಾಗುತ್ತದೆ.
ಸ್ಪೀಕರ್ ಯು.ಟಿ.ಖಾದರ್ ಅವರ ಸೂಚನೆ ಮೇರೆಗೆ ವಿಧಾನಸೌಧದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರಿಗೆ ಪರಿಚಯ ಇರುವ ವ್ಯಕ್ತಿಯೇ ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಧಾನಸೌದ ಸಿಸಿಟಿವಿಯನ್ನು ಸಹ ಪರಿಶೀಲನೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಭದ್ರತಾ ವೈಫಲ್ಯ ನಡೆದಿರುವ ಬಗ್ಗೆ ಗೃಹ ಸಚಿವ ಪರಮೇಶ್ವರ್ ವರದಿ ನೀಡುವಂತೆ ಡಿಸಿಪಿಗೆ ಸೂಚಿಸಿದ್ದಾರೆ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಗೆ ಮಾರ್ಷಲ್ಸ್ ಮುಖ್ಯಸ್ಥರು ದೌಡಾಯಿಸಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ವಿಧಾನಸೌಧ ಭದ್ರತಾ ವಿಭಾಗ ಡಿಸಿಪಿ ಸಹ ಪೊಲೀಸ್ ಠಾಣೆಗೆ ಬಂದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : Karnataka Budget: ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ 34 ಸಾವಿರ ಕೋಟಿ ರೂ. ಸಿಎಂ ಸಿದ್ದರಾಮಯ್ಯ ಘೋಷಣೆ