ಬೆಂಗಳೂರು: ಜೈಲಿನಲ್ಲಿ ಕಳ್ಳತನದ ಸಂಚು ರೂಪಿಸಿ ಹೊರಬಂದ ಕೂಡಲೇ ಮನೆಗಳ್ಳತನ ಮಾಡುತ್ತಿದ್ದ ಅಂತರರಾಜ್ಯ ಆರೋಪಿ ಸೇರಿದಂತೆ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋವಾದ ರಾಜು, ಲಗ್ಗೆರೆಯ ಜೀವನ್, ಬೆಳಗಾವಿಯ ಶ್ರೀನಿವಾಸ ಮತ್ತು ರಾಜಾನುಕುಂಟೆಯ ಲಕ್ಷ್ಮಿ ನಾರಾಯಣ ರೆಡ್ಡಿ ಬಂಧಿತ ಆರೋಪಿಗಳು. ಬಂಧಿತರಿಂದ 25 ಲಕ್ಷ ರೂ. ಬೆಲೆಬಾಳುವ 640 ಗ್ರಾಂ ಚಿನ್ನಾಭರಣ, 60 ಸಾವಿರ ರೂ. ಬೆಲೆ ಬಾಳುವ ಒಂದೂವರೆ ಕೆ.ಜಿ ಬೆಳ್ಳಿ, 12.50 ಲಕ್ಷ ರೂ. ಬೆಲೆಬಾಳುವ 2 ಕಾರು, 2.90 ಲಕ್ಷ ರೂ. ಬೆಲೆಬಾಳುವ ದ್ವಿಚಕ್ರವಾಹನ, 1.50 ಲಕ್ಷ ರೂ. 3 ಎಲ್‌ಇಡಿ ಟಿವಿಗಳು, 2 ಲ್ಯಾಪ್‌ಟ್ಯಾಪ್, ಕ್ಯಾಮೆರಾ ಸೇರಿದಂತೆ ಒಟ್ಟು 43.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ 9 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳು ಜೈಲಿನಲ್ಲಿರುವಾಗ ಕಳ್ಳತನಕ್ಕೆ ಸಂಚು ರೂಪಿಸಿಕೊಂಡಿದ್ದರು. ಆ ನಂತರ ಹೊರ ಬಂದ ಕೂಡಲೇ ಕಳ್ಳತನಕ್ಕೆ ಇಳಿದಿದ್ದರು. ಈ ಕುರಿತು ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನ ಮಾಡಿರುವುದಾಗಿ ದೂರು ದಾಖಲಾಗಿತ್ತು. ಈ ಕಳ್ಳರ ಪತ್ತೆಗಾಗಿ ಪೊಲೀಸರ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು.
ಆರೋಪಿಗಳ ವಿರುದ್ಧ ಬ್ಯಾಡರಹಳ್ಳಿ, ಬ್ಯಾಟರಾಯನಪುರ, ಕೆ.ಆರ್.ಪುರ ಸೇರಿದಂತೆ ನಗರದ ವಿವಿಧ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 9 ಪ್ರಕರಣ ಪತ್ತೆ ಹಚ್ಚಲಾಗಿದೆ. ಆರೋಪಿಗಳ ಪೈಕಿ ರಾಜು ಅಂತರರಾಜ್ಯ ಕಳ್ಳನಾಗಿದ್ದು, ಗೋವಾದಲ್ಲಿ ಈತನ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಆರೋಪಿಗಳನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳು ಕೃತ್ಯ ನಡೆಸಲು ಹೈಡ್ರಾಲಿಕ್ ಕಟರ್ ಮತ್ತು ವಿಶೇಷವಾದ ಕಬ್ಬಿಣದ ರಾಡ್‌ಗಳನ್ನು ಬಳಸುತ್ತಿದ್ದರು. ಮನೆಗಳ ಬೀಗ ಹೊಡೆದು ಕಳ್ಳತನ ಮಾಡುತ್ತಿರುವುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.