ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಆಗಸ್ಟ್ ತಿಂಗಳ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಪಡಿತರದಾರರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತಿದೆ.
ರಾಜ್ಯ ಸರ್ಕಾರವು ಜುಲೈ ತಿಂಗಳಿನಿಂದ ರಾಜ್ಯದ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಹೊಂದಿರುವ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ವಿತರಿಸುವುದಾಗಿ ಘೋಷಿಸಿತ್ತು. ಈ ಅಕ್ಕಿಯ ಅಗತ್ಯವನ್ನು FCI (ಫುಡ್ ಕಾರ್ಪೋರೇಷನ್)ನಿಂದ ದೇಶೀಯ ಮುಕ್ತ ಮಾರುಕಟ್ಟೆಯಲ್ಲಿ (OMSS(D) ಅಕ್ಕಿಯನ್ನು ಖರೀದಿಸುವ ಮೂಲಕ ಪೂರೈಸಲು ಯೋಜಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ಜುಲೈ 2023ರಿಂದ ದೇಶೀಯ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟವನ್ನು ಸ್ಥಗಿತಗೊಳಿಸಿದೆ. ಹಾಗಾಗಿ, ರಾಜ್ಯವು ಜುಲೈನಿಂದ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಪಿಎಚ್‌ಎಚ್) ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯನ್ನು ಪ್ರಾರಂಭಿಸಿತು. ಮತ್ತು ಅದೇ ರೀತಿ ಮುಂದುವರಿಯುತ್ತಿದೆ.
ಆಗಸ್ಟ್ ತಿಂಗಳ ಹಣ ಪಾವತಿ : ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ವಿತರಿಸಲಾಗಿದೆ. ಹೆಚ್ಚುವರಿ 5 ಕೆಜಿ ಬದಲಿಗೆ ಪಡಿತರ ಚೀಟಿಯಲ್ಲಿರುವಂತೆ ಕುಟುಂಬದ ಪ್ರತಿ ಫಲಾನುಭವಿಗೆ (ಪ್ರತಿ ಕೆ.ಜಿ.ಗೆ 34 ರೂ. ನಂತೆ) 170 ರೂ.ಗಳನ್ನು ಪಡಿತರ ಕುಟುಂಬದ ಮುಖ್ಯಸ್ಥರ ಖಾತೆಗೆ ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ಪಾವತಿ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯ ಆಗಸ್ಟ್ ತಿಂಗಳ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಪಡಿತರದಾರರ ಖಾತೆಗೆ ಪಾವತಿಸಲಾಗುತ್ತಿದೆ.
ಅರ್ಹ ಪಡಿತರ ಕಾರ್ಡ್ಗಳಲ್ಲಿ 1,03,68,897 ಪಡಿತರ ಕಾರ್ಡ್ಗಳಿದ್ದು, ಇದರಲ್ಲಿ 3,69,36,906 ಅರ್ಹ ಫಲಾನುಭವಿಗಳಿದ್ದಾರೆ. ಇದಕ್ಕೆ ಒಟ್ಟು 605 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದೆ. 31 ಜಿಲ್ಲೆಗಳ ಪೈಕಿ ಬೀದರ್, ಚಿತ್ರದುರ್ಗ, ದಾವಣಗೆರೆ, ರಾಮನಗರ, ಹಾವೇರಿ ಜಿಲ್ಲೆಗಳ ಪಡಿತರದಾರದ ಖಾತೆಗೆ ಹಣ ಸಂದಾಯವಾಗಿದ್ದು, ಇನ್ನು 5 ದಿನಗಳಲ್ಲಿ ಎಲ್ಲಾ ಜಿಲ್ಲೆಗಳ ಅರ್ಹ ಫಲಾನುಭವಿಗಳ ಖಾತೆಗೆ ಹಣ ತಲುಪಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರ ಜುಲೈ 10ರಿಂದ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗಳ ಖಾತೆಗೆ ನಗದು ಜಮೆ ಮಾಡಲು ಆರಂಭಿಸಿತ್ತು. ರಾಜ್ಯದಲ್ಲಿ 10,89,990 ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿದಾರರಿದ್ದರೆ, 1,17,26,296 ಆದ್ಯತಾ ಪಡಿತರ ಚೀಟಿದಾರರಿದ್ದಾರೆ. ಒಟ್ಟು 4.42 ಕೋಟಿ ಕುಟುಂಬ ಸದಸ್ಯರು ಇದರ ಫಲಾನುಭವಿಗಳಾಗಿದ್ದಾರೆ.
ಇದನ್ನೂ ಓದಿ : Anna Bhagya: ಅನ್ನಭಾಗ್ಯದಡಿ ಈವರೆಗೆ 3.29 ಕೋಟಿ ಫಲಾನುಭವಿಗಳಿಗೆ ಹಣ ಜಮೆ: ಹಲವರಿಗೆ ಪಾವತಿ ವಿಳಂಬ