ಬೆಂಗಳೂರು : ರೌಡಿ ಶೀಟರ್ ಅಣ್ಣೇಗೌಡ ಅಲಿಯಾಸ್ ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಯಾದ ಆಂಜನೇಯನ ಕೊಲೆ ಕೇಸ್ಗೆ ಸಂಬಂಧಿಸಿದಂತೆ 8ನೇ ಆರೋಪಿ ಹಾಗೂ ಪತ್ರಕರ್ತ ಮಹಬೂಬ್ ಸುಬಾನಿ ಎಂಬುವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮಹಬೂಬ್ ಸುಬಾನಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಜೆ.ಶಂಕರೇಗೌಡ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, "ಅರ್ಜಿದಾರರು, ಪತ್ರಕರ್ತರಿಗೆ ನೀಡಲಾಗುವ ಪ್ರತಿಷ್ಠಿತ ರಾಮನಾಥ ಗೋಯಂಕಾ ಪ್ರಶಸ್ತಿ ಪುರಸ್ಕೃತರು. ಅವರೊಬ್ಬ ಜವಾಬ್ದಾರಿಯುತ ನಾಗರಿಕನಾಗಿ ಆರೋಪಿಗಳನ್ನು ಪೊಲೀಸರ ಮುಂದೆ ಹಾಜರು ಪಡಿಸಿರುತ್ತಾರೆ. ಸಾಕ್ಷ್ಯ ನಾಶಪಡಿಸುವ ಯಾವುದೇ ಉದ್ದೇಶ ಹೊಂದಿರುವುದಿಲ್ಲ ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ನೆರವಾಗುವಂತೆ ಯಾವುದೇ ಆರೋಪಿಗೆ ಆಶ್ರಯ ಕೊಟ್ಟಿರುವುದಿಲ್ಲ" ಎಂದು ವಾದ ಮಂಡಿಸಿದರು.
ಈ ಅಂಶ ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಷ್ಟೇ ಮೊತ್ತಕ್ಕೆ ಒಬ್ಬರ ಖಾತ್ರಿ ನೀಡಬೇಕು ಎಂದು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ : ರೌಡಿ ಹಂದಿ ಅಣ್ಣಿ ಹತ್ಯೆ ಹಿಂದಿನ ಕಾರಣ ಬಾಯ್ಬಿಟ್ಟ ಆರೋಪಿಗಳು
ಪ್ರಕರಣದ ಹಿನ್ನೆಲೆ ಏನು? : ಆಂಜನೇಯನ ಕೊಲೆ ಹಾಗೂ ಆತನ ಸ್ನೇಹಿತ ಮಧು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನ್ಯಾಮತಿ ಪೊಲೀಸ್ ಠಾಣೆಯಲ್ಲಿ 2023ರ ಮಾರ್ಚ್ 15 ರಂದು ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ನಡುವೆ ಈ ಆರು ಜನ ಆರೋಪಿಗಳು ಮಹಬೂಬ್ ಸುಬಾನಿ ಅವರನ್ನು ಸಂಪರ್ಕಿಸಿ ಕೊಲೆಯ ಬಗ್ಗೆ ತಿಳಿಸಿದ್ದರು. ಆಗ ಅವರಲ್ಲಿ ಕೊಲೆಯ ಕೃತ್ಯವೆಸಗಿದ ನಾಲ್ಕು ಜನರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದ ಮಹಬೂಬ್ ಸುಬಾನಿ, ಹಾವೇರಿ ಜಿಲ್ಲೆಯ ಶಿಗ್ಗಾವಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುಂದೆ ಅವರನ್ನೆಲ್ಲಾ ಹಾಜರುಪಡಿಸಿದ್ದರು.
ಇದನ್ನೂ ಓದಿ : ಹಂದಿ ಅಣ್ಣಿ ಕೊಲೆ ಕೇಸ್: ಎನ್ಕೌಂಟರ್ ಭೀತಿಯಲ್ಲಿ ಎಸ್ಪಿ ಮುಂದೆ ಶರಣಾದ ಆರೋಪಿಗಳು
ಆರೋಪಿಗಳನ್ನು ವಶಕ್ಕೆ ಪಡೆದಿದ್ದ ತನಿಖಾಧಿಕಾರಿಗಳು, "ಆರೋಪಿಗಳು ಕೊಲೆ ಮಾಡಿದ್ದಾರೆಂಬುದು ಗೊತ್ತಿದ್ದೂ ಮಹಬೂಬ್ ಸುಬಾನಿ ಇವರನ್ನೆಲ್ಲಾ ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ ಮತ್ತು ಇನ್ನಿಬ್ಬರು ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸದೇ ಸಾಕ್ಷ್ಯ ನಾಶಪಡಿಸಿರುತ್ತಾರೆ" ಎಂದು ಆರೋಪಿಸಿ ಅವರನ್ನು 8ನೇ ಆರೋಪಿ ಎಂದು ಗುರುತಿಸಿದ್ದರು. ನಂತರ 2023 ರ ಮಾರ್ಚ್ 16 ರಂದು ಅವರ ಮನೆಯಿಂದ ದಸ್ತಗಿರಿ ಮಾಡಲಾಗಿತ್ತು. ಪ್ರಕರಣದಲ್ಲಿ ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ರದ್ದು ಪಡಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ರೌಡಿಶೀಟರ್ ಕೊಲೆ ಹಳೇ ವೈಷಮ್ಯದಿಂದಲೇ ನಡೆದಿದೆ ಎಂದ ಶಿವಮೊಗ್ಗ ಎಸ್ಪಿ.. ಭಯ ಮೂಡಿಸುತ್ತಿದೆ ಸಿಸಿಟಿವಿ ದೃಶ್ಯ!