ಬೆಂಗಳೂರು: ಪಾದರಾಯನಪುರದ ಗಲಭೆಕೋರರನ್ನು ರಾಮನಗರ ಕಾರಾಗೃಹಕ್ಕೆ ಸ್ಥಳಾಂತರಿಸುವ ಮೂಲಕ ರಾಜ್ಯ ಸರ್ಕಾರ ಅಪರಾಧವೆಸಗಿದೆ ಎಂದು ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿರುವ ಪಾದರಾಯನಪುರ ಗಲಭೆಕೋರರನ್ನು ಬೇರೆಡೆಗೆ ಸ್ಥಳಾಂತರಿಸಿ ರಾಮನಗರ ಜಿಲ್ಲೆಯ ಜನತೆಯ ಆತಂಕವನ್ನು ದೂರ ಮಾಡಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಂದಾಗಬಹುದಾದ ಅನಾಹುತದ ಬಗ್ಗೆ ಸರ್ಕಾರಕ್ಕೆ ಮೊದಲೇ ಕಿವಿ ಹಿಂಡಿದ್ದರು. ಜಾಣ ಕಿವುಡುತನ ಪ್ರದರ್ಶಿಸಿದ ರಾಜ್ಯ ಸರ್ಕಾರ, ಕೊರೊನಾ ಸೋಂಕನ್ನು ಜಿಲ್ಲೆಗೆ ತಂದಿದ್ದು ಸರಿನಾ? ಇದರ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ ಎಂದು ಅವರು ಆರೋಪಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಹಾಗೂ ವೈದ್ಯರು ಆಗಿರುವ ಡಾ. ಅಶ್ವತ್ಥ್ ನಾರಾಯಣ್ ಅವರು ಹಾರಿಕೆಯ ಹೇಳಿಕೆ ನೀಡುವುದು ಬಿಟ್ಟು ಜವಾಬ್ದಾರಿತನದಿಂದ ವರ್ತಿಸಲಿ. ವಾಸ್ತವ ಸ್ಥಿತಿಯನ್ನು ಅರಿತು ಪ್ರತಿಕ್ರಿಯಿಸಲಿ. ಜಿಲ್ಲೆಯ ಜನತೆಯೊಂದಿಗೆ ಚೆಲ್ಲಾಟ ಮಾಡುವುದನ್ನು ಬಿಡಲಿ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಬೇಜವಾಬ್ದಾರಿತನವನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ತಕ್ಷಣ ರಾಮನಗರ ಕೈದಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡದಂತೆ ಅಗತ್ಯ ವೈದ್ಯಕೀಯ ಮುನ್ನೆಚ್ಚರಿಕೆ ವಹಿಸಬೇಕು ಇಲ್ಲದಿದ್ದರೆ ಬೀದಿಗಿಳಿದು ಜಿಲ್ಲೆಯ ಜನತೆಯ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.