ಆನೇಕಲ್: ನಗರದ ಕಾವಲಹೊಸಹಳ್ಳಿ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಶವದ ಸುತ್ತ ಹುಟ್ಟಿಕೊಂಡಿದ್ದ ಅನುಮಾನಗಳಿಗೆ ತೆರೆ ಬಿದ್ದಿದೆ. ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದರು, ಮೊದಲು ಕಾಣೆಯಾದವರ ಪ್ರಕರಣವನ್ನು ಕೆದಕಿದಾಗ ನಗರದ ಗಿರಿಜಾಶಂಕರ್ ಬಡಾವಣೆಯ ನಾಗರಾಜು ಎಂಬುವರ ಮಗ ಪದ್ಮನಾಭ (27) ಎಂಬಾತ ನಾಪತ್ತೆಯಾಗಿದ್ದ. ಈ ಕುರಿತು ಕರೆಸಿ ವಿಚಾರಿಸಿದಾಗ ಅದು ಅವರ ಮಗನ ಮೃತದೇಹ ಅನ್ನೋದು ತಿಳಿದು ಬಂದಿತ್ತು.
ಆಗ ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ಕೊಲೆಯಾದ ಸುತ್ತಲಿನ ಮೊಬೈಲ್ ಟವರ್ ಕರೆಗಳ ಚಲನವಲನ ಮತ್ತು ಸಂಬಂಧಿಗಳನ್ನು ವಿಚಾರಣೆ ನಡೆಸಿದರು. ಕೊಲೆಯಾದ ಪದ್ಮನಾಭನ ತಂದೆಗೆ ಇಬ್ಬರು ಹೆಂಡತಿಯರಿದ್ದು ಪದ್ಮನಾಭ ಮೊದಲ ಪತ್ನಿಯ ಮಗ. ಇನ್ನು ಎರಡನೇ ಹೆಂಡತಿಗೆ ವಿನೋದ್ ಮತ್ತು ಗೋವರ್ದನ್ ಎಂಬ ಇಬ್ಬರು ಮಕ್ಕಳಿರುವುದು ತಿಳಿದುಬಂದಿತ್ತು.
ಗೋವರ್ದನ್ ನನ್ನು ತಿವ್ರ ವಿಚಾರಣೆಗೆ ಒಳಪಡಿಸಿದಾಗ ವಿಷಯ ಬೆಳಕಿಗೆ ಬಂದಿದೆ. ತಂದೆ ನಾಗರಾಜ್ ಮನೆಯನ್ನು ಮೊದಲನೆ ಪತ್ನಿ ಮಗ ಪದ್ಮನಾಭನಿಗೆ ಬರೆದುಕೊಟ್ಟಿದ್ದ. ಈ ವಿಚಾರವಾಗಿ ಆಸ್ತಿ ಆಸೆಗೆ ಬಿದ್ದು ಸ್ವಂತ ತಮ್ಮನನ್ನೇ ಕೊಲೆ ಮಾಡಿದ್ದಾಗಿ ಗೋವರ್ದನ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.