ಆನೇಕಲ್: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಅತ್ತಿಬೆಲೆ ಮೇಲ್ಸೇತುವೆ ಹತ್ತುವ ಜಾಗದಲ್ಲಿ ವೇಗವಾಗಿ ಬಂದ ಮಿಲ್ಕಿಮಿಸ್ಟ್ ಕಂಟೈನರ್ ರಸ್ತೆ ಬ್ಯಾರಿಕೇಡ್ಗೆ ಡಿಕ್ಕಿಯಾಗಿ ಎಡ ಮಗ್ಗುಲಿಗೆ ಬಿದ್ದ ಪರಿಣಾಮ ಚಾಲಕ ಹಾಗು ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ನಸುಕಿನಲ್ಲಿ ನಿದ್ರಾ ಸ್ಥಿತಿಯಲ್ಲಿದ್ದ ಚಾಲಕ ವಾಹನ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ತಮಿಳುನಾಡಿನ ಈರೋಡಿನ ವಾಹನ ಚಾಲಕ ಕಾರ್ತಿಕೇಯನ್ ಮತ್ತು ಕ್ಲೀನರ್ ಉದಯ್ ಕುಮಾರ್ ಸಾವನ್ನಪ್ಪಿದ್ದಾರೆ.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಮಿಲ್ಕಿಮಿಸ್ಟ್ ಮೊಸರು ಪಾಕೆಟ್ಗಳನ್ನು ವೈಟ್‌ಫೀಲ್ಡ್ ಮಾರಾಟ ಕೇಂದ್ರಕ್ಕೆ ಸಾಗಿಸುವುದಕ್ಕೆ ತೆರಳುತ್ತಿದ್ದ ವಾಹನ ಇದಾಗಿತ್ತು. ಈರೋಡ್ ಪರಂದುರೈ ಗ್ರಾಮದ ಮಿಲ್ಕಿಮಿಸ್ಟ್ ಕಂಪನಿಯ ವಾಹನ ಬೆಳಗ್ಗೆ ಬೊಮ್ಮಸಂದ್ರ ಬ್ರಾಂಚ್ಗೆ ಬಂದು ಮೊಸರು ಸಾಗಿಸುವ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ಅತ್ತಿಬೆಲೆ ಇನ್ಸ್ಪೆಕ್ಟರ್ ಕೆ. ವಿಶ್ವನಾಥ್ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ, ಎಎಸ್ಪಿ ಪುರುಷೋತ್ತಮ್ ಮತ್ತು ಡಿವೈಎಸ್ಪಿ ಲಕ್ಷ್ಮಿನಾರಾಯಣ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.
ನದಿಗೆ ಉರುಳಿ ಬಿದ್ದ ಮಿನಿ ಟ್ರಕ್: 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮಿನಿ ಟ್ರಕ್ ಒಂದು ವೇಗವಾಗಿ ಬಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ಇಂದು ನಡೆದಿದೆ. ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದು, 36ಕ್ಕೂ ಹೆಚ್ಚು ಮಂದಿ ಗಾಯಂಗೊಂಡಿದ್ದಾರೆ. ಗ್ವಾಲಿಯರ್ನ ಬಿಲ್ಹೇಟಿ ಗ್ರಾಮದಿಂದ ಜಾತಾರಾಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಎಲ್ಲರೂ ಮಿನಿ ಟ್ರಕ್‌ನಲ್ಲಿ ತೆರಳುತ್ತಿದ್ದರು. ವೇಗವಾಗಿ ಹೋಗುತ್ತಿದ್ದ ಮಿನಿ ಟ್ರಕ್, ಬುಹಾರಾ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಎರಡು ಬಸ್ಗಳ ನಡುವೆ ಅಪಘಾತ: ಸರ್ಕಾರಿ ಹಾಗೂ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ 12 ಜನರು ಸಾವನ್ನಪ್ಪಿರುವ ಘಟನೆ ಒಡಿಶಾ ರಾಜ್ಯದ ಗಂಜಾಂನಲ್ಲಿ ಇತ್ತೀಚೆಗೆ ನಡೆದಿತ್ತು. ರಾಯಗಢ ಜಿಲ್ಲೆಯ ಗುಡಾರಿ ಪ್ರದೇಶದಿಂದ ಭವನೇಶ್ವರಕ್ಕೆ ಹೋಗುತ್ತಿದ್ದ ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೆರ್ಹಾಮ್ಪುರದಿಂದ ವಾಪಾಸಾಗುತ್ತಿದ್ದ ಖಾಸಗಿ ಬಸ್ ಗಂಜಾಂ ಬಳಿ ಮುಖಾಮುಖಿ ಡಿಕ್ಕಿಯಾಗಿತ್ತು. 12 ಜನರಲ್ಲಿ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
ಇದನ್ನೂ ಓದಿ: Hit and run: ವಿಜಯನಗರ ಜಿಲ್ಲೆಯಲ್ಲಿ ಹಿಟ್ ಆ್ಯಂಡ್ ರನ್ಗೆ ಇಬ್ಬರು ರೈತರು ಬಲಿ