ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ನಟಿ ಹಾಗು ನಿರೂಪಕಿ ಅನುಶ್ರೀ ಹೆಸರು ಕೇಳಿ ಬಂದ ಕಾರಣ ಅವರು ಮುಂಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.
'ನಾನು ಎಲ್ಲೂ ಹಾರಿ ಹೋಗಿಲ್ಲ'
'ಡ್ರಗ್ಸ್ ಸೇವನೆ, ಖರೀದಿ ಪ್ರಕರಣದಲ್ಲಿ ಪೊಲೀಸರು ನನ್ನ ವಿಚಾರಣೆ ನಡೆಸಿರಲಿಲ್ಲ. ಕಳೆದ ವರ್ಷ ವಿಚಾರಣೆಗೆ ಕರೆದಾಗ ಕಾನೂನು ರೀತಿ ಎಲ್ಲವನ್ನೂ ಹೇಳಿದ್ದೇನೆ. ಸೋಮವಾರ ಮುಂಬೈಗೆ ವೈಯಕ್ತಿಕ ಕೆಲಸದ ನಿಮಿತ್ತ ಹೋಗಿದ್ದೆ. ಅಂದೇ ನಾನು ರಿಟರ್ನ್ ಟಿಕೆಟ್ ಕೂಡ ಬುಕ್ ಮಾಡಿದ್ದೆ. ನಾನು ಎಲ್ಲೂ ಹಾರಿ ಹೋಗಿಲ್ಲ, ಇಲ್ಲೇ ಇದ್ದೀನಿ' ಎಂದು ಅವರು ಹೇಳಿದ್ದಾರೆ.
'ನಾನು ಬಾಡಿಗೆ ಮನೆಯಲ್ಲೇ ಇದ್ದೇನೆ'
'ಆರೋಪಿಗಳು ಏನು ಬೇಕಾದರೂ ಆರೋಪ ಮಾಡಲಿ, ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಯಾವುದೇ ಪ್ರಭಾವಿಗಳ ಬೆಂಬಲವೂ ಇಲ್ಲ. ನಾನು ಕಳೆದ 3 ವರ್ಷದಿಂದ ಇದೇ ಮನೆಯಲ್ಲಿ ಇದ್ದೇನೆ. ಬಾಡಿಗೆ ಬಗ್ಗೆ ನಮ್ಮ ಮನೆ ಮಾಲೀಕರ ಬಳಿ ಕೇಳಬಹುದು. ಮಂಗಳೂರಿನ ಕದ್ರಿಯಲ್ಲಿ ಒಂದು ಮನೆ ಇದೆ. ಆದರೆ ಆ ಮನೆಯ ಮೇಲೆ ಸಾಲವಿದೆ' ಎಂದು ಅನುಶ್ರೀ ತಿಳಿಸಿದ್ದಾರೆ.
'ಅಷ್ಟೇ ಅಲ್ಲ, ನನ್ನ ಬಗ್ಗೆ ಮಾತಾಡುವ ನೂರಾರು ಜನರಿಗೆ ಉತ್ತರಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ ಮಾಡುತ್ತಿರುವ ಎಲ್ಲ ಆರೋಪಗಳು ಸುಳ್ಳು. ಯಾವಾಗ ವಿಚಾರಣೆಗೆ ಕರೆದರೂ ನಾನು ಹೋಗುತ್ತೇನೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅನುಶ್ರೀ ಡ್ರಗ್ಸ್ ಕನ್ಸೂಮರ್ ಅಲ್ಲ ಅಕೆಯೇ ಡಗ್ಸ್ ಸಪ್ಲೈಯರ್ : ಪ್ರಶಾಂತ್ ಸಂಬರಗಿ ಹೊಸ ಬಾಂಬ್
'ಚಾರ್ಜ್ಶೀಟ್ ಬಗ್ಗೆ ಗೊತ್ತಿಲ್ಲ'
'ಚಾರ್ಜ್ಶೀಟ್ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ. ಕಿಶೋರ್ ಶೆಟ್ಟಿಯನ್ನು 12 ವರ್ಷದ ಹಿಂದೆ ನೋಡಿದ್ದೆ. 13 ವರ್ಷ ಹಿಂದೆ ಅವರು ಕೊರಿಯೋಗ್ರಾಫರ್ ಆಗಿದ್ದರು. ಆ ರಿಯಾಲಿಟಿ ಶೋನಲ್ಲಿ ನಾನು ವಿನ್ನರ್ ಆಗಿದ್ದೆ. ಆಗ ಪ್ರಾಕ್ಟೀಸ್ ಮಾಡಲು ಎಲ್ಲರೂ ಒಂದೇ ಕಡೆ ಇದ್ದ ಕಾರಣ ಒಟ್ಟಿಗೆ ಊಟ ಮಾಡಿದ್ವಿ' ಅಂತಾ ಅನುಶ್ರೀ ಹೇಳಿದ್ದಾರೆ.
'ನನ್ನ ತಾಯಿಗೆ ಏನಾದರೂ ಆದರೆ, ಅವರು ಎಷ್ಟೇ ಪ್ರಭಾವಿಯಾಗಿದ್ದರೂ ಸುಮ್ಮನೆ ಬಿಡಲ್ಲ'
'ಇದರ ಜೊತೆಗೆ ನಾನು ಸಿಂಪಲ್ ಪರ್ಸನ್. ಯಾವ ಪಬ್, ಬಾರ್, ಪಾರ್ಟಿಗಳಿಗೂ ಹೋಗಲ್ಲ. ಈ ಎಲ್ಲ ಘಟನೆಗಳಿಂದ ನಾನು ಮತ್ತಷ್ಟು ಗಟ್ಟಿಯಾಗಿದ್ದೇನೆ. ಈ ಬೆಳವಣಿಗೆಯಿಂದ ನನ್ನ ತಾಯಿಗೆ ಏನಾದರೂ ಆದರೆ, ಅವರು ಎಷ್ಟೇ ಪ್ರಭಾವಿ ಆಗಿದ್ದರೂ ಸುಮ್ಮನೆ ಬಿಡಲ್ಲ' ಎಂದು ಅನುಶ್ರೀ ಎಚ್ಚರಿಕೆ ನೀಡಿದ್ದಾರೆ.