ಬೆಂಗಳೂರು: ಖಾತೆ ಹಂಚಿಕೆಗೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆನಂದ್ ಸಿಂಗ್ ಮನವೊಲಿಕೆ ಮಾಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದು, ಆನಂದ್ ಸಿಂಗ್ ರಾಜೀನಾಮೆ ಪ್ರಹಸನ ಸುಖಾಂತ್ಯ ಕಂಡಿದೆ.
ಸಚಿವ ಆರ್.ಅಶೋಕ್ ಅವರ ಅಪಾರ್ಟ್ಮೆಂಟ್ನಲ್ಲಿ ಆನಂದ್ ಸಿಂಗ್ ಸಂಧಾನ ಸಭೆ ನಡೆಸಲಾಯಿತು. ಎಸ್ಕಾರ್ಟ್ ಬಿಟ್ಟು ಬಂದ ಸಿಎಂ ಬಸವರಾಜ ಬೊಮ್ಮಾಯಿ, ಆನಂದ್ ಸಿಂಗ್ ಜೊತೆ ಮಾತುಕತೆ ನಡೆಸಿದರು. ಎರಡು ಗಂಟೆಗಳ ಕಾಲ ಮಾತುಕತೆ ನಡೆಸಲಾಯಿತು. ಸಚಿವ ಅಶೋಕ್ ಹಾಗೂ ಶಾಸಕ ರಾಜೂಗೌಡ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಡೆಗೂ ರಾಜೀನಾಮೆ ನಿರ್ಧಾರದಿಂದ ಆನಂದ್ ಸಿಂಗ್ ಹಿಂದೆ ಸರಿದಿದ್ದು, ಸಚಿವರಾಗಿ ಮುಂದುವರೆಯುವ ನಿರ್ಧಾರ ಪ್ರಕಟಿಸಿದರು.
ನಾವಿಬ್ಬರು ಫ್ರೆಂಡ್ಸ್
ಸಂಧಾನ ಸಭೆ ನಂತರ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹಿಂದಿನ ಸರ್ಕಾರದಲ್ಲಿ ನಾನು ಆನಂದ್ ಸಿಂಗ್ ಒಟ್ಟಿಗೆ ಕೆಲಸ ಮಾಡಿದ್ದೇವೆ. ಇದಕ್ಕಿಂತ ಉತ್ತಮ ಖಾತೆ ಬೇಕು ಎಂದು ಬಯಸಿರುವುದು ನಿಜ. ಆದರೆ, ಅದನ್ನು ಪಕ್ಷದಲ್ಲಿ ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ ಎಂದರು.
ಆನಂದ್ ಸಿಂಗ್ ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಈ ಎಲ್ಲ ವಿಚಾರಗಳನ್ನು ಎಲ್ಲಿ ತಲುಪಿಸಬೇಕು ಅಲ್ಲಿಗೆ ತಲುಪಿಸುತ್ತೇವೆ. ವರಿಷ್ಠರು ಏನು ನಿರ್ಧಾರ ಮಾಡುತ್ತಾರೋ ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎನ್ನುವ ನಿರ್ಧಾರ ಕೈಗೊಂಡಿದ್ದೇವೆ. ನಾವೆಲ್ಲ ಒಂದಾಗಿ ಹೋಗಬೇಕು ಎಂದು ನಿರ್ಧರಿಸಿದ್ದೇವೆ ಎಂದರು.
ವಿಶ್ವಾಸದ ಮಾತುಗಳನ್ನಾಡಿದ ಸಿಎಂ
ಇಂದಿನ ಮಾತುಕತೆ ವೇಳೆ ಆನಂದ್ ಸಿಂಗ್ ಪೂರಕವಾಗಿ ಸ್ಪಂದಿಸಿದ್ದಾರೆ. ನಮ್ಮ ಮತ್ತು ಅವರ ವಿಚಾರದಲ್ಲಿ ಯಾವುದೇ ಭೇದವಿಲ್ಲ. ಆದರೆ, ಅವರಿಗೆ ಹೆಚ್ಚಿನ ಖಾತೆ ನಿಭಾಯಿಸಬಲ್ಲ , ಸಾಮರ್ಥ್ಯಕ್ಕೆ ತಕ್ಕಂತೆ ಖಾತೆ ಬೇಕು ಎನ್ನುವ ಆಸೆ ಇದೆ. ಅದನ್ನು ಬಿಟ್ಟರೆ ಮತ್ತೇನೂ ಇಲ್ಲ. ನಮಗೂ ಅವರಿಗೂ ಸಾಮ್ಯತೆ ಇದೆ. ನಾವೆಲ್ಲ ಒಟ್ಟಾಗಿ ಹೋಗುತ್ತೇವೆ ನಮ್ಮ ಹಾಗೂ ಆನಂದ್ ಸಿಂಗ್ ನಡುವೆ ಒಳ್ಳೆಯ ಸಂಬಂಧವೇಇದೆ. ಮೊದಲು ಇತ್ತು.. ಇವತ್ತೂ ಇದೆ.. ನಾಳೆನೂ ಇರಲಿದೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.
ಆಗಸ್ಟ್ 15 ರಂದು ವಿಜಯನಗರದಲ್ಲಿ ಆನಂದ್ ಸಿಂಗ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣ ಕುರಿತು ನಾನು ಆದೇಶ ಮಾಡಿದಾಗಲೇ ಅವರು ಒಪ್ಪಿಕೊಂಡಿದ್ದಾರೆ . ಆದೇಶದ ಪ್ರಕಾರ ಅವರು ಧ್ವಜಾರೋಹಣ ಮಾಡಲಿದ್ದಾರೆ ಎಂದರು.
ಸಚಿವ ಆರ್ ಅಶೋಕ್ ಮಾತನಾಡಿ, ಆನಂದ್ ಸಿಂಗ್ ನಮ್ಮ ಪಕ್ಷದ ಹಿರಿಯ ನಾಯಕರು, ಒಳ್ಳೆ ವಾತಾವರಣದಲ್ಲಿ ಇಂದು ಮಾತುಕತೆ ನಡೆದಿದೆ. ಆನಂದ್ ಸಿಂಗ್ ಅವರ ಭಾವನೆಗಳನ್ನು ಎರಡು ಗಂಟೆಗಳ ಕಾಲ ಕೇಳಿದ್ದೇವೆ. ಮುಖ್ಯಮಂತ್ರಿಗಳು ಕೇಂದ್ರದ ನಾಯಕರ ಜೊತೆ ಚರ್ಚೆ ಮಾಡಿ ಮುಂದೆ ಏನು ಮಾಡಬೇಕು ಎಂದು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಆದರೆ ನಾವೆಲ್ಲರೂ ಆನಂದ್ ಸಿಂಗ್ ಜೊತೆ ಇರುತ್ತೇವೆ.ಆನಂದ್ ಸಿಂಗ್ ರಾಜೀನಾಮೆ ಕೊಡುವುದಿಲ್ಲ ಅದೆಲ್ಲ ಶುದ್ಧ ಸುಳ್ಳು ಎಂದು ಹೇಳಿದರು.
ನಗು ಬೀರಿದ ಆನಂದ್ ಸಿಂಗ್
ಸಚಿವ ಆನಂದ್ ಸಿಂಗ್ ಮಾತನಾಡಿ, ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿಲ್ಲ. ಹಾಗಾಗಿ ಆ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಮುಖ್ಯಮಂತ್ರಿಗಳಿಗೆ ನನ್ನ ಮನವಿ ಏನು ಎನ್ನುವುದನ್ನು ತಿಳಿಸಿದ್ದೇನೆ. ಆದ್ಯತೆ ಮೇರೆಗೆ ಬೇಡಿಕೆ ಪರಿಶೀಲನೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಬೇರೆ ಖಾತೆ ಕೇಳಿದ್ದು ನಿಜ, ನನ್ನ ಮನವಿ ಪರಿಗಣಿಸಿದ್ದಾರೆ. ವರಿಷ್ಠರ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಹಾಗಾಗಿ ನಾನು ಅವರಿಗೆ ಸಹಕಾರ ಕೊಡುತ್ತೇನೆ ಎಂದು ಕೊನೆಗೂ ನಗು ಬೀರಿದರು.